– ಬ್ಲ್ಯಾಕ್‌ಮೇಲ್‌ನಂತಹ ಪದಗಳನ್ನು ಬಳಸುವುದು ಬೇಡ
ಬೆಂಗಳೂರು: ನಿಮ್ಮ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ಹೋರಾಟ ಇನ್ನಷ್ಟು ಹೆಚ್ಚು ಮಾಡುತ್ತೇವೆ ಎಂದು ದೊಡ್ಡಬಳ್ಳಾಪುರ(Doddaballapur) ಬಿಜೆಪಿ ಶಾಸಕ ಧೀರಜ್ ಮುನಿರಾಜು (Dheeraj Muniraj) ಡಿಸಿಎಂ ಡಿಕೆ ಶಿವಕುಮಾರ್ (DK Shivakumr) ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ಮನೆ ಮುಂದೆ ಕಸ ಸುರಿಯುತ್ತೇವೆ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 501 ಕಸದ ಲಾರಿಗಳಲ್ಲಿ(Garbage Truck) 70 ಲಾರಿಗಳು ದೊಡ್ಡಬಳ್ಳಾಪುರಕ್ಕೆ ಬರಬೇಕು. ಆದರೆ ನಿನ್ನೆ ಏಕಾಏಕಿ ಮಹಾದೇವಪುರ, ಬ್ಯಾಟರಾಯನಪುರಗಳಲ್ಲಿ ಪ್ರತಿಭಟನೆ ನಡೆದಿದ್ದಕ್ಕೆ ನಮ್ಮಲ್ಲಿಗೆ ಕಸದ ಲಾರಿಗಳು ಬಂದಿದ್ದಕ್ಕೆ ನಾವು ತಡೆದಿದ್ದೇವೆ ಎಂದು ಜನರೊಂದಿಗೆ ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ಡಿಕೆಶಿ ಅವರು ಬಿಜೆಪಿ ಕಚೇರಿ ಮುಂದೆ ಅಶೋಕ್, ವಿಜಯೇಂದ್ರ ಅವರ ಮನೆ ಮುಂದೆ ಕಸ ಹಾಕುವುದು ಬೇಡ. ಅವರು ನಮ್ಮ ಮನೆ ಮುಂದೆ ತಂದು ಕಸ ಹಾಕಲಿ. ನಾವು ಏನು ಮಾಡಬೇಕೋ ಮಾಡುತ್ತೇವೆ. ನಾವು ಕಸದ ಲಾರಿಗಳನ್ನು ತಡೆದಿಲ್ಲ. 72 ಕಸದ ಲಾರಿಗಳನ್ನು ಬಿಟ್ಟಿದ್ದೇವೆ. ಅದರ ಮೇಲೆ ಬಂದ 400 ಲಾರಿಗಳನ್ನು ತಡೆದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಿಜಯೇಂದ್ರ, ಅಶೋಕ್ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಕೆಶಿ ವಾರ್ನಿಂಗ್
ನಾನು ಒಂದೇ ಒಂದು ರೂಪಾಯಿ ಅನುದಾನವನ್ನು ಘನತಾಜ್ಯ ನಿರ್ವಹಣೆಗೆ ಕೇಳಿಲ್ಲ. ನಾವು ಅನುದಾನಕ್ಕೆ ಬ್ಲಾಕ್‌ಮೇಲ್ ಮಾಡಿಲ್ಲ, ಪ್ರತಿಭಟನೆ ಮಾಡಿಲ್ಲ. ಬ್ಯಾಟರಾಯನಪುರ, ಮಹಾದೇವಪುರಗಳಿಗೆ 200 ಲಾರಿ ಕಸ ಹೋಗುತ್ತದೆ. ಅಲ್ಲಿಗೆ 90 ಕೋಟಿ ರೂ. ಕೊಟ್ಟಿದ್ದಾರೆ. ಆನೇಕಲ್‌ಗೆ ನಾಲ್ಕು ಲಾರಿ ಹೋಗುತ್ತಿದ್ದು ಅಲ್ಲಿಗೆ 50 ಕೋಟಿ ರೂ. ಅನುದಾನ ಹೋಗಿದೆ. ಆದರೆ ದೊಡ್ಡಬಳ್ಳಾಪುರಕ್ಕೆ ಮಾತ್ರ ಹತ್ತು ಕೋಟಿ ರೂ. ಕೊಟ್ಟಿದ್ದಾರೆ ಎಂದರು.
ನಮಗೆ ನಿಮ್ಮ ಕಸವೂ ಬೇಡ, ನಿಮ್ಮ ಕಸದ ಹಣವೂ ಬೇಡ. ಈಗಾಗಲೇ ಹೈಕೋರ್ಟ್, ಎನ್‌ಜಿಟಿಯಲ್ಲಿ ಕೇಸ್ ಹಾಕಿದ್ದೇನೆ. ಡಿಕೆಶಿ ಅವರು ಬ್ಲಾಕ್‌ಮೇಲ್‌ನಂತಹ ಪದಗಳನ್ನು ಬಳಸುವುದು ಬೇಡ. ಎಸ್ಮಾ ಹಾಕುತ್ತೇನೆ ಎಂದಿದ್ದೀರಿ. ಖಂಡಿತವಾಗಿ ಎಸ್ಮಾ ಹಾಕಿ, ಜೈಲಿಗೆ ಬೇಕಾದರೂ ಕಳಿಸಿ. ಆದರೆ ನಿಮ್ಮ ದೌರ್ಜನ್ಯ, ದಬ್ಬಾಳಿಕೆಗೆ ಹೆದರುವುದಿಲ್ಲ. ದೊಡ್ಡಬಳ್ಳಾಪುರ ಜನ ಏನು ಪಾಪ ಮಾಡಿದ್ದಾರೆ? ನಮ್ಮ ರೈತರಿಗೆ ಯಾಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

