ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಪರಿಚಿತ ಲಘು ವಿಮಾನವೊಂದು ಪದೇ-ಪದೇ ಹಾರಾಟ ನಡೆಸುತ್ತಿರುವುದು ಮಲೆನಾಡಿಗರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಕಾಣಿಸಿಕೊಂಡಿದ್ದ ವಿಮಾನ ಗುರುವಾರ (ಫೆ.12) ಮತ್ತೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು, ಕಳಸ ಪಟ್ಟಣದ ಸುತ್ತಮುತ್ತ ನಾಲ್ಕೈದು ಬಾರಿ ಹಾರಾಟ ನಡೆಸಿದೆ.
ಈ ಬಾರಿ ವಿಮಾನವು ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಅದರ ಕಿಟಕಿಗಳು ಕೂಡ ಜನರಿಗೆ ಸ್ಪಷ್ಟವಾಗಿ ಕಾಣಿಸುವಷ್ಟು ಸಮೀಪಕ್ಕೆ ಬಂದಿರುವುದು ಸ್ಥಳೀಯರನ್ನು ಆಶ್ಚರ್ಯ ಮತ್ತು ಚಿಂತೆಗೀಡು ಮಾಡಿದೆ. ಈ ವಿಮಾನವು ಯಾರಿಗೆ ಸೇರಿದ್ದು ಅಥವಾ ಯಾವ ಉದ್ದೇಶಕ್ಕಾಗಿ ಹಾರಾಟ ನಡೆಸುತ್ತಿದೆ ಎಂಬ ಬಗ್ಗೆ ಈವರೆಗೂ ಯಾರಿಗೂ ಯಾವುದೇ ಮಾಹಿತಿ ಇಲ್ಲ. ವಿಮಾನದ ಬಗ್ಗೆ ಜಿಲ್ಲಾಡಳಿತ, ಅರಣ್ಯ ಹಾಗೂ ಕಂದಾಯ ಇಲಾಖೆಗೂ ಯಾವುದೇ ಮಾಹಿತಿ ಇಲ್ಲ. ಜೊತೆಗೆ ಬಂದೋಬಸ್ತ್ ಕೊಡಬೇಕಾದ ಪೊಲೀಸ್ ಇಲಾಖೆಗೂ ಇದರ ಬಗ್ಗೆ ಯಾವುದೇ ಮಾಹಿತಿ ಇರದಿರುವುದು ನಾನಾ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಇದನ್ನೂ ಓದಿ: ಕಳಸದ ಸುತ್ತಮುತ್ತ ಕೆಳಭಾಗದಲ್ಲಿ ಹಾರಾಡಿದ ಲಘು ವಿಮಾನ – ಸ್ಥಳೀಯರ ಆತಂಕ, ಫ್ಲೈಟ್ ಹಿಂದೆ ಬಿದ್ದ ಪೊಲೀಸರು!
ಇನ್ನು ಜಿಲ್ಲೆಯಲ್ಲಿ ಸರ್ಕಾರದ ಯಾವುದೇ ಇಲಾಖೆಯ ವತಿಯಿಂದ ಯಾವುದೇ ಸರ್ವೇ ಕಾರ್ಯಗಳು ಕೂಡ ನಡೆಯುತ್ತಿಲ್ಲ. ರಹಸ್ಯವಾಗಿ ಹಾರಾಟ ನಡೆಸುತ್ತಿರುವ ಈ ವಿಮಾನದ ಪತ್ತೆಗೆ ಈಗಾಗಲೇ ಪೊಲೀಸರು ಮುಂದಾಗಿದ್ದು, ಅವರಿಗೂ ಯಾವುದೇ ಮಾಹಿತಿ ಇಲ್ಲದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕೇವಲ 3-4 ದಿನಗಳ ಅಂತರದಲ್ಲಿ ಪದೇ-ಪದೇ ಮಲೆನಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಿಗೂಢ ಲಘು ವಿಮಾನದ ಹಾರಾಟ ಎನ್.ಆರ್.ಪುರ ಹಾಗೂ ಕಳಸ ತಾಲೂಕಿನ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ. ಮೊನ್ನೆ ಭದ್ರಾ ನದಿ ತಟದಲ್ಲೇ ಹಾರಾಟ ನಡೆಸಿದ್ದ ವಿಮಾನ ಇಂದು ಅರಣ್ಯ ಪ್ರದೇಶಗಳ ಭಾಗದಲ್ಲಿ ಓಡಾಡಿದೆ. ಮೊನ್ನೆ ಹಾಗೂ ಇಂದು ಎರಡೂ ದಿನವೂ ಚಿಕ್ಕಮಗಳೂರು ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಭಾಗಕ್ಕೆ ಹೋಗಿದೆ. ಆದರೆ, ಯಾರದ್ದು ಎಂಬ ಯಾವುದೇ ಮಾಹಿತಿ ಇಲ್ಲ. ಇದನ್ನೂ ಓದಿ: ಶಾಸಕರ ಪಿಎ ಕಿರುಕುಳ ಆರೋಪ – ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಡಿಸಿ ಮುಂದೆ ಹಾಜರ್

