ಅಯೋಧ್ಯೆ: ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬರುವ ಮುನ್ನ ರಾಮಮಂದಿರದಲ್ಲಿ ಪ್ರತಿನಿತ್ಯ 6-8 ಲಕ್ಷ ರೂ. ಲೂಟಿ ಆಗಿರುವ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ.
ದೇಣಿಗೆ ಎಣಿಕೆ ಹೊಣೆ ಹೊತ್ತಿರುವ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿದಾಗ, ಹಗರಣ ಬೆಳಕಿಗೆ ಬರುವ ಮುನ್ನ ಟ್ರಸ್ಟ್ ಬ್ಯಾಂಕ್ ಖಾತೆಗಳಿಗೆ ದಿನವೊಂದಕ್ಕೆ ಸರಾಸರಿ 16 ಲಕ್ಷದಿಂದ 18 ಲಕ್ಷದವರೆಗೆ ಠೇವಣಿ ಆಗುತ್ತಿತ್ತು. ಆದರೆ, ಹಗರಣ ಬೆಳಕಿಗೆ ಬಂದ ಬಳಿಕ ಇದೀಗ ನಿತ್ಯ 24 ಲಕ್ಷದಿಂದ 26 ಲಕ್ಷದ ರೂ. ವರೆಗೆ ಜಮೆ ಏರಿಕೆಯಾಗಿದೆ ಎಂಬುದು ಗೊತ್ತಾಗಿದೆ. ಬ್ಯಾಂಕ್‌ನ ಈ ಅಂಕಿ ಅಂಶಗಳ ಪ್ರಕಾರ ನಿತ್ಯ 6 ಲಕ್ಷದಿಂದ 8 ಲಕ್ಷ ರೂ. ವರೆಗೆ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿ ಅನುಕಲ್ಪ್ ಮಿಶ್ರಾ ಆಸ್ತಿ ಜಾಡು ಪತ್ತೆ

ಹಣ ಕಳ್ಳತನದಿಂದಾಗಿ ದೇಣಿಗೆ ಎಣಿಕಾ ಸಿಬ್ಬಂದಿಗೆ ಡ್ರೆಸ್‌ಕೋಡ್ ತರಲಾಗಿದೆ. ಜೇಬುಗಳಿಲ್ಲದ ಕಡು ನೀಲಿ ಬಣ್ಣದ ಸಮವಸ್ತ್ರ ಧರಿಸಬೇಕು. ಹಣ ಎಣಿಕೆಗೆ ಬರುವವರು 2 ಬಾರಿ ತಪಾಸಣೆ ಆಗಬೇಕು. ಹಣ ಎಣಿಕೆ ಇನ್ನುಮುಂದೆ ಕುರ್ಚಿ ಮೇಲೆ ಕೂತು ಮಾಡದೆ, ನೆಲದ ಮೇಲೆ ಕೂತು ಹಣ ಎಣಿಕೆ ಮಾಡಬೇಕು. ದೇಣಿಗೆ ಎಣಿಕಾ ಕೇಂದ್ರದಲ್ಲಿ ಶೂ ಅಥವಾ ಚಪ್ಪಲಿ ಹಾಕುವಂತಿಲ್ಲ ಅಂತ ರಾಮಮಂದಿರ ಟ್ರಸ್ಟ್ ಹೊಸ ನಿಯಮ ಜಾರಿಗೆ ತಂದಿದೆ.
ಇನ್ನು, ಚಂದಾಚೋರಿ ಹಗರಣವನ್ನು ಸಿಬಿಐಗೆ ಒಪ್ಪಿಸುವಂತೆ ಹಾಗೂ ಸಿಎಜಿಯಿಂದ ಲೆಕ್ಕ ಪರಿಶೋಧನೆ ಮಾಡಿಸುವಂತೆ ಅಲಹಾಬಾದ್ ಹೈಕೋರ್ಟ್ಗೆ ವಕೀಲ ಮೋಹಿತ್ ಅಶೋಕ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸೋಮವಾರ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಅಯೋಧ್ಯೆ ಮಾದರಿಯಲ್ಲೇ ಬದರಿನಾಥ-ಕೇದಾರನಾಥದಲ್ಲೂ ದೇಣಿಗೆ ಕಳ್ಳತನ ಆರೋಪದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಬದರಿನಾಥ-ಕೇದಾರನಾಥ ದೇಗುಲ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ಸಮಯದಲ್ಲಿ ಆರೋಪಗಳು ನಿಜವೆಂದು ಸಾಬೀತಾದರೆ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪುರಾವೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸುತ್ತದೆ ಎಂದು ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗದ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಆಯ್ತು, ಈಗ ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ
