ಅಯೋಧ್ಯೆ: ಅಯೋಧ್ಯೆಯ(Ayodhya) ಶ್ರೀರಾಮ ಮಂದಿರ(Rama Mandir)ದೇಣಿಗೆ ಕಳವು ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ಹಾಗೂ ಆತನ ಬಾವ (ಸೋದರಿಯ ಪತಿ) ಲವಕುಶ್ ಮಿಶ್ರಾ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಈ ಆಸ್ತಿಗಳನ್ನು ದೇಣಿಗೆ ಹಣ ದುರ್ಬಳಕೆ ಮೂಲಕ ಖರೀದಿಸಿರುವ ಶಂಕೆಯ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶೇಷ ತನಿಖಾ ತಂಡ ಇದುವರೆಗೆ ಇಬ್ಬರ ಹೆಸರಿಗೆ ಸಂಬಂಧಿಸಿದಂತೆ ಅರ್ಧ ಡಜನ್‌ಗಿಂತ ಹೆಚ್ಚು ಜಮೀನು, ಮನೆ ಹಾಗೂ ಇತರೆ ಸ್ಥಿರಾಸ್ತಿಗಳನ್ನು ಪತ್ತೆಹಚ್ಚಿದೆ. ಈ ಆಸ್ತಿಗಳ ಖರೀದಿ ಮೂಲ, ಹಣಕಾಸು ವ್ಯವಹಾರಗಳು ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಯ ಸಹಕಾರದೊಂದಿಗೆ ಆರ್ಥಿಕ ವಹಿವಾಟಿನ ಸಂಪೂರ್ಣ ತನಿಖೆ ನಡೆಯುತ್ತಿದೆ.
ತನಿಖಾಧಿಕಾರಿಗಳ ಪ್ರಕಾರ, ರಾಮಮಂದಿರದ ದೇಣಿಗೆ ಹಣ ಎಣಿಕೆಯ ಕಾರ್ಯದಲ್ಲಿ ತೊಡಗಿದ್ದ ಕೆಲ ಸಿಬ್ಬಂದಿ ಸಂಘಟಿತ ಜಾಲ ರಚಿಸಿ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಜಾಲದಲ್ಲಿ ಅನುಕಲ್ಪ್ ಮಿಶ್ರಾ ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ಆರೋಪವಿದ್ದು, ದೇಣಿಗೆಯಿಂದ ಕಳವಾದ ಹಣವನ್ನು ಆಸ್ತಿ ಖರೀದಿಗೆ ಬಳಸಿರುವ ಸಾಧ್ಯತೆಯನ್ನು ತನಿಖೆ ಪರಿಶೀಲಿಸುತ್ತಿದೆ.
ದಿನವೂ ₹6–8 ಲಕ್ಷ ಹಣ ಲೂಟಿ ಶಂಕೆ
ತನಿಖೆಯ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಬ್ಯಾಂಕ್ ಸಿಬ್ಬಂದಿಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ಪ್ರತಿದಿನ ಸುಮಾರು ₹6 ರಿಂದ ₹8 ಲಕ್ಷದವರೆಗೆ ದೇಣಿಗೆ ಹಣವನ್ನು ಲೂಟಿ ಮಾಡಲಾಗುತ್ತಿತ್ತು ಎಂಬ ಪ್ರಾಥಮಿಕ ಅಂದಾಜಿಗೆ ತನಿಖಾಧಿಕಾರಿಗಳು ಬಂದಿದ್ದಾರೆ.ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಆಗ್ತಾ ಇರೋದು ವಾಹನಗಳ ಬ್ರೇಕ್ ಡೌನ್‌ನಿಂದ: ಪ್ರಿಯಾಂಕ್ ಖರ್ಗೆ
ಎಸ್‌ಐಟಿ ವಿಚಾರಣೆ ವೇಳೆ ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಹಗರಣ ಬಯಲಾಗುವ ಮೊದಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಾತೆಗೆ ಪ್ರತಿದಿನ ಸರಾಸರಿ ₹16ರಿಂದ ₹18 ಲಕ್ಷ ದೇಣಿಗೆ ಜಮೆಯಾಗುತ್ತಿತ್ತು. ಆದರೆ ಪ್ರಕರಣ ಬಹಿರಂಗವಾದ ನಂತರ ಅದೇ ಮೊತ್ತ ₹24ರಿಂದ ₹26 ಲಕ್ಷಕ್ಕೆ ಏರಿಕೆಯಾಗಿದೆ. ಈ ವ್ಯತ್ಯಾಸವನ್ನು ಆಧರಿಸಿ ಪ್ರತಿದಿನ ₹6ರಿಂದ ₹8 ಲಕ್ಷ ಹಣ ದುರುಪಯೋಗವಾಗಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿ ಬದಲಾವಣೆ
ಹಗರಣದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಹಣ ಎಣಿಸುವ ಸಿಬ್ಬಂದಿಗೆ ಜೇಬುಗಳಿಲ್ಲದ ಕಡು ನೀಲಿ ಬಣ್ಣದ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಸಿಬ್ಬಂದಿಯನ್ನು ಎರಡು ಹಂತಗಳಲ್ಲಿ ತಪಾಸಣೆ ನಡೆಸಲಾಗುತ್ತದೆ.
ಇನ್ನು ಮುಂದೆ ಹಣ ಎಣಿಕೆಯನ್ನು ಮೇಜು-ಕುರ್ಚಿಗಳ ಮೇಲೆ ಕುಳಿತು ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಸಿಬ್ಬಂದಿ ನೆಲದ ಮೇಲೆ ಕುಳಿತು ಹಣ ಎಣಿಸಬೇಕು. ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಕ್ಯಾಮೆರಾ, ಬ್ಯಾಗ್ ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಶೂ ಅಥವಾ ಚಪ್ಪಲಿ ಧರಿಸಿ ಪ್ರವೇಶಿಸುವುದಕ್ಕೂ ಅವಕಾಶವಿಲ್ಲ.ಇದನ್ನೂ ಓದಿ: 480 ಕೋಟಿ ರೂ. ವೆಚ್ಚದ ಜೋಧ್‌ಪುರ ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟಿಸಿದ ಮೋದಿ
