ಶ್ರೀನಗರ: ಜಮ್ಮು & ಕಾಶ್ಮೀರದ (Jammu And Kashmir) ಕಿಶ್ತ್ವಾರ್ ಜಿಲ್ಲೆಯ ಅಥೋಲಿ ಠಾಣೆಗೆ ನುಗ್ಗಿ ಪೊಲೀಸರ (Police) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಮಾಂಡಿಂಗ್ ಅಧಿಕಾರಿ ಮತ್ತು ಮೇಜರ್ ಸೇರಿದಂತೆ ನಲವತ್ತು ಸೇನಾ (Indian Army) ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೇನಾ ಸಿಬ್ಬಂದಿ ಠಾಣೆಯ ಆವರಣದೊಳಗಿದ್ದ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ 17 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಎನ್ ಅರುಣ್ ಗಾಂಧಿ, ಮೇಜರ್ ವಿಕಾಸ್ ಶರ್ಮಾ, ನೈಬ್ ಸುಬೇದಾರ್ ಶಂಕರ್ ಗುರ್ಖೆ ಮತ್ತು ಇತರ 30-40 ಮಂದಿ ಸೇನಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ನಾಶದ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: 10 ಜನ , 6 ಸಾವಿರ ಬಾಡಿಗೆ – ಶಂಕಿತ ಉಗ್ರನಿಗೆ ಮನೆ ಕೊಟ್ಟ ಮಾಲೀಕರು ಹೇಳಿದ್ದೇನು?
ಸೇನಾ ಸಿಬ್ಬಂದಿಯಿಂದ ಹಲ್ಲೆಗೊಳಗಾದವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಭಗತ್ ಮತ್ತು ಅಥೋಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮೃತ್ ಕಟೋಚ್ ಸೇರಿದ್ದಾರೆ. ದಾಳಿ ವೇಳೆ ಎಸ್‌ಡಿಪಿಒ ಅಥೋಲಿ ವಿಜಯ್ ಕುಮಾರ್ ಭಗತ್ ಅವರ ಸಮವಸ್ತ್ರ ಹರಿದು ಹಾಕಲಾಗಿದೆ. ಇದು ಪೂರ್ವ ಯೋಜಿತವಾಗಿ ದಾಳಿಯಾಗಿದೆ ಎಂದು ಆರೋಪಿಸಲಾಗಿದೆ.
ಸೇನಾ ಸಿಬ್ಬಂದಿ ಲಾಠಿ, ಕಬ್ಬಿಣದ ರಾಡ್ ಮತ್ತು ಸೇವಾ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಅವರು ನಮ್ಮನ್ನು ಕೊಲ್ಲಲು ಯತ್ನಿಸಿದ್ದರು. ದಾಳಿಯಿಂದ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ವರದಿಗಳ ಪ್ರಕಾರ ಕಿಶ್ತ್ವಾರ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಸೇನೆಯ ವಾಹನವನ್ನು ವಶಪಡಿಸಿಕೊಂಡ ನಂತರ ಸೇನಾ ಸಿಬ್ಬಂದಿ ಠಾಣೆಗೆ ನುಗ್ಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಆಯುಕ್ತರು, ತನಿಖೆಗೆ ಭಾರತೀಯ ಸೇನೆ ಸಂಪೂರ್ಣ ಸಹಕಾರ ನೀಡುತ್ತದೆ. ಜಂಟಿ ತನಿಖೆಯ ಬಳಿಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಹಂತದಲ್ಲಿ ತನಿಖೆಗಳು ಪ್ರಗತಿಯಲ್ಲಿರುವಾಗ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು | ಪ್ರೀತಿ ಹೆಸರಲ್ಲಿ ಗರ್ಭಿಣಿಯಾಗಿಸಿ ವಂಚನೆ ಆರೋಪ – ಡೆತ್‌ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ
