ಜೈಪುರ: ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ರಾಜಸ್ಥಾನ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳದ (ACB) ತನಿಖೆಗೆ ಅನುಮತಿ ನೀಡಿದೆ. ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಕೋಟಿಗಟ್ಟಲೆ ಆಸ್ತಿ ಮಾಡಿರುವ ಆರೋಪದ ಮೇಲೆ ಐಎಎಸ್-ಐಪಿಎಸ್ ದಂಪತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿ ಹೋಟೆಲ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ, ತಾವು ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಯಲಿದೆ.
ಕುಟುಂಬದ ಹೆಸರಿನಲ್ಲಿ 36 ವಿಲ್ಲಾ ಖರೀದಿ
ಎಸಿಬಿಯ ಪ್ರಾಥಮಿಕ ವಿಚಾರಣೆಯಲ್ಲಿ ಉದಯಪುರದ ಬುಜ್ಡಾ ಮತ್ತು ಅಲ್ವಾರ್ನ ಅಜಬ್ಗಢದಲ್ಲಿರುವ ಅನಂತ ರೆಸಾರ್ಟ್ಗಳ ವಿಲ್ಲಾಗಳ ಖರೀದಿ ವಿವರಗಳು ಬೆಳಕಿಗೆ ಬಂದಿವೆ.
ಉದಯಪುರದ ಬುಜ್ಡಾದಲ್ಲಿ 20 ವಿಲ್ಲಾ:
ಮಾರ್ಚ್ 2026ರಲ್ಲಿ ಒಟ್ಟು 20 ವಿಲ್ಲಾಗಳನ್ನು ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪೈಕಿ 10 ವಿಲ್ಲಾಗಳು ಶಿಖರ್ ಅಗರವಾಲ್ ಅವರ ಹೆಸರಿನಲ್ಲಿ ಹಾಗೂ ಉಳಿದ 10 ವಿಲ್ಲಾಗಳು ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರ ಹೆಸರಿನಲ್ಲಿ ನೋಂದಣಿಯಾಗಿವೆ ಎನ್ನಲಾಗಿದೆ.
ಪ್ರತಿ ವಿಲ್ಲಾವನ್ನು ಸುಮಾರು 15 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಈ 20 ವಿಲ್ಲಾಗಳ ಒಟ್ಟು ಮೌಲ್ಯ ಸುಮಾರು 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಅಜಬ್ಗಢದಲ್ಲಿರುವ ಅನಂತ ರೆಸಾರ್ಟ್ನಲ್ಲಿ ಒಟ್ಟು 16 ವಿಲ್ಲಾಗಳನ್ನು ಅಗರವಾಲ್ ಕುಟುಂಬದವರು ಖರೀದಿಸಿದ್ದಾರೆ ಎಂಬ ಆರೋಪವಿದೆ.
ಅಗರವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ತಲಾ ನಾಲ್ಕು ವಿಲ್ಲಾಗಳಿವೆ. ಇಬ್ಬರು ಪುತ್ರರ ಹೆಸರಿನಲ್ಲಿ ತಲಾ ಎರಡು ವಿಲ್ಲಾಗಳಂತೆ ಒಟ್ಟು ನಾಲ್ಕು ವಿಲ್ಲಾಗಳು.
ಅಗರವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಎಂಟು ವಿಲ್ಲಾಗಳ ಬೆಲೆ ತಲಾ 16.5 ಲಕ್ಷ ರೂ. ಎಂದು ವರದಿಯಾಗಿದೆ. ಪುತ್ರರ ಹೆಸರಿನಲ್ಲಿರುವ ನಾಲ್ಕು ವಿಲ್ಲಾಗಳ ಬೆಲೆ ತಲಾ 15 ಲಕ್ಷ ರೂ. ಎನ್ನಲಾಗಿದೆ. ಮಾವಂದಿರ ಹೆಸರಿನಲ್ಲಿರುವ ವಿಲ್ಲಾಗಳ ಬೆಲೆಯೂ ತಲಾ 16.5 ಲಕ್ಷ ರೂ. ಎಂದು ಹೇಳಲಾಗಿದೆ.
ಒಂದೇ ದಿನ 20 ವಿಲ್ಲಾಗಳ ನೋಂದಣಿ?
ಎಸಿಬಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ಅಂಶವೆಂದರೆ, 2026ರ ಮಾರ್ಚ್ 27ರಂದು ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್ಗೆ ಹಣಕಾಸು ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ಯಾಕೇಜ್ ನೀಡಲಾಗಿದೆ ಎನ್ನುವುದು. ಇದೇ ದಿನ ಅಗರವಾಲ್ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ 20 ವಿಲ್ಲಾಗಳು ನೋಂದಣಿಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೆಹಲಿ ಶೂ ಕಾರ್ಖಾನೆಯಲ್ಲಿ ಅಗ್ನಿ ಅವಘಡ – ನಾಲ್ವರು ದುರ್ಮರಣ
ಒಟ್ಟಾರೆ, ಉದಯಪುರದ ಬುಜ್ಡಾದಲ್ಲಿ 20 ಹಾಗೂ ಅಲ್ವಾರ್ನ ಅಜಬ್ಗಢದಲ್ಲಿ 16 ಸೇರಿದಂತೆ ಒಟ್ಟು 36 ವಿಲ್ಲಾಗಳ ಖರೀದಿಯನ್ನು ಎಸಿಬಿ ಪರಿಶೀಲಿಸುತ್ತಿದೆ. ವರದಿಯಾದ ಬೆಲೆಗಳ ಪ್ರಕಾರ ಈ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 5.52 ಕೋಟಿ ರೂಪಾಯಿಗಳಾಗಬಹುದು. ಈ ರೀತಿಯ ಸಾಲು ಸಾಲು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಈಗ ಪರೀಶಿಲನೆ ನಡೆದಿದ್ದು, ತನಿಖೆ ಬಳಿಕ ಸಂತ್ಯ ಹೊರಬರಲಿದೆ.ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದ ಚಿನ್ನ ಕಳ್ಳ ಸಾಗಣೆ ಆರೋಪಿ ರನ್ಯಾ ರಾವ್
