ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಕ್ವಾದಲ್ಲಿರುವ (Khyber Pakhtunkhwa) ಪೊಲೀಸ್ ಚೆಕ್ ಪೋಸ್ಟ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.
ವಾಯುವ್ಯ ಪಾಕಿಸ್ತಾನದ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿರುವ ರಸ್ತೆಬದಿಯ ಪೊಲೀಸ್ ತಪಾಸಣಾ ಕೇಂದ್ರದ ಬಳಿ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಲಾಗಿದೆ. ಇದರಿಂದ 11 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಪಿಒಕೆಯನ್ನು ಸ್ಮಶಾನ ಮಾಡಿದ್ದಾರೆ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಕಾಶ್ಮೀರಿ ಮಹಿಳೆ ಗುಡುಗು
ಮೃತರ ಪೈಕಿ ಅಬಕಾರಿ ಮತ್ತು ಸುಂಕ (ಕಸ್ಟಮ್ಸ್) ಇಲಾಖೆಯ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ. ದಾಳಿಯಲ್ಲಿ ಬಳಸಲಾದ ಸ್ಫೋಟಕಗಳ ಸ್ವರೂಪವನ್ನು ಪತ್ತೆಹಚ್ಚಲು ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.
ಮೃತದೇಹಗಳನ್ನು ಮತ್ತು ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ದಾಳಿಯ ಹೊಣೆಯನ್ನು ‘ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್’ (ಪಾಕಿಸ್ತಾನಿ ತಾಲೀಬಾನ್) ಸಂಘಟನೆ ಹೊತ್ತುಕೊಂಡಿದೆ. ದಾಳಿಯ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಂದು ವಾರದ ಹಿಂದಷ್ಟೇ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಕೊಹಾಟ್ ಜಿಲ್ಲೆಯ ಮಸೀದಿಯೊಂದರ ಮೇಲೆ ಸಹ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಪೊಲೀಸ್ ಠಾಣೆಯ ಹೊರಗೋಡೆ ಕುಸಿದು ಬಿದ್ದಿತ್ತು ಮತ್ತು ಮಸೀದಿಗೆ ತೀವ್ರ ಹಾನಿಯಾಗಿತ್ತು. ಈ ಘಟನೆಯಲ್ಲಿ 21 ಜನ ಸಾವನ್ನಪ್ಪಿ 78 ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳೂ ಇದ್ದರು. ಇದನ್ನೂ ಓದಿ: ಉಗ್ರ ಹಫೀಜ್ ಸಯೀದ್ ವಿರುದ್ಧ ಯಾವಾಗ ಕ್ರಮ? – ಭಾರತೀಯ ಪತ್ರಕರ್ತನ ಪ್ರಶ್ನೆಗೆ ಪಾಕ್ ಪ್ರಧಾನಿ ಗಪ್ಚುಪ್!


