ಲಂಡನ್: ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ವಿಚಾರದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಮೌನಕ್ಕೆ ಶರಣಾದ ಘಟನೆ ನಡೆದಿದೆ. ಪಾಕಿಸ್ತಾನ ದೇಶವು ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಗಳ ಕುರಿತು ಪ್ರಶ್ನಿಸಿದಾಗಲೂ ಶರೀಫ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.
81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಗೆ ಶೆಹಬಾಜ್ ಶರೀಫ್ ಆಗಮಿಸಿದ ವೇಳೆ, ಭಾರತೀಯ ವರದಿಗಾರ ನೇರವಾಗಿ ಪ್ರಶ್ನೆ ಕೇಳಿದರು.
#WATCH | New York, US: “When will you prosecute Lashkar-e-Taiba (LeT) chief Hafiz Saeed?” ANI questions Pakistani Prime Minister Shehbaz Sharif again as he leaves the UN headquarters. Pakistani PM refuses to answer. pic.twitter.com/hqzw9w3lDM
— ANI (@ANI) September 24, 2026
ʻʻಪ್ರಧಾನಿ ಅವರೇ, ಉಗ್ರರಿಗೆ ಆಶ್ರಯ ನೀಡುವುದನ್ನ ನೀವು ಯಾವಾಗ ನಿಲ್ಲಿಸುತ್ತೀರಿ?ʼʼ ಎಂದು ಪ್ರಶ್ನೆ ಮಾಡಿದ್ರು. ಆದ್ರೆ ಶರೀಫ್ ಯಾವುದೇ ಉತ್ತರ ಕೊಡದೇ ವಿಶ್ವಸಂಸ್ಥೆ ಆವರಣದೊಳಗೆ ಪ್ರವೇಶಿಸಿದ್ರು. ಕಚೇರಿಯಿಂದ ವಾಪಸ್ ಬರುವಾಗಲೂ ಹಫೀಜ್ ಸಯೀದ್ (Hafiz Saeed) ಕುರಿತು ಪ್ರಶ್ನೆ ಎದುರಾಯಿತು. ʻಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ನೀವು ಯಾವಾಗ ಕಾನೂನು ಕ್ರಮ ಕೈಗೊಳ್ಳುತ್ತೀರಿ?ʼ ಎಂದು ಕೇಳಲಾಯಿತು. ಈ ಪ್ರಶ್ನೆಗೂ ಶರೀಫ್ ಯಾವುದೇ ಉತ್ತರ ನೀಡಲಿಲ್ಲ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು, ಪಾಕ್ ಪ್ರಧಾನಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದೆ.

ಯಾರು ಹಫೀಜ್ ಸಯೀದ್?
ಪಾಕಿಸ್ತಾನ ಮೂಲದ ಹಫೀಜ್ ಸಯೀದ್ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಸಂಸ್ಥಾಪಕರಲ್ಲಿ ಪ್ರಮುಖ ವ್ಯಕ್ತಿ. ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), 1967 ಅಡಿಯಲ್ಲಿ ಆತ ಉಗ್ರಗಾಮಿ ಎಂದು ಘೋಷಿಸಲ್ಪಟ್ಟಿದ್ದಾನೆ. 2008ರ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲೂ ಹಫೀಜ್ ಕೈವಾಡ ಇತ್ತೆಂದು ಸಾಬೀತಾಗಿದೆ.

ಇದಲ್ಲದೆ, 2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಹಫೀಜ್ ಸಯೀದ್‌ನನ್ನ 8ನೇ ಆರೋಪಿ ಎಂದು ಹೆಸರಿಸಲಾಗಿದೆ. ನಿಷೇಧಿತ LeTನ ಪಾಕಿಸ್ತಾನ ಮೂಲದ ಕಾರ್ಯಕರ್ತರು ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು NIA ಆರೋಪಿಸಿದೆ.

