– ವಿವಿಧ ಗ್ರಾಪಂಗಳಿಗೆ ಭೇಟಿ; ‘ವಿಬಿ-ಜಿ ರಾಮ್ ಜಿ’ ಕಾಮಗಾರಿಗಳ ಪರಿಶೀಲನೆ
ಬೆಳಗಾವಿ: ‘ವಿಬಿ-ಜಿ ರಾಮ್ ಜಿ’ ಯೋಜನೆಯಡಿ ಎಲ್ಲ ಕೂಲಿಕಾರರಿಗೆ ಕಡ್ಡಾಯವಾಗಿ ಕೆಲಸ ಕೊಡುವಂತೆ ಹಾಗೂ ಇ-ಸ್ವತ್ತು ಅರ್ಜಿಗಳನ್ನು ತ್ವರಿತವಾಗಿ ವಿತರಣೆ ಮಾಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.
ತಾಲೂಕಿನ ನೀಲಜಿ ಹಾಗೂ ಹೊನಗಾ ಗ್ರಾಮ ಪಂಚಾಯತ ಕಾರ್ಯಾಲಯಗಳಿಗೆ ಗುರುವಾರ ಭೇಟಿ ನೀಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ವಿಬಿ-ಜಿ ರಾಮ್ ಜಿ ಹಾಗೂ ಇ-ಸ್ವತ್ತು ಕುರಿತು ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಬಾರದು. ಸರ್ಕಾರದ ನಿರ್ದೇಶನದಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕಾಮಗಾರಿ ಸ್ಥಳಕ್ಕೆ ಭೇಟಿ:
ನೀಲಜಿ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಿಇಒ ರವರು, ಎಷ್ಟು ಕೂಲಿಕಾರರಿಗೆ ಕೂಲಿ ನೀಡಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆದರು. ನಂತರ ಗ್ರಾಪಂ ವ್ಯಾಪ್ತಿಯ ಶಿಂಧೋಳಿ ಗ್ರಾಮದಲ್ಲಿ ಪ್ರಗತಿಯಲ್ಲಿದ್ದ ತಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರ ಹಾಜರಾತಿಯನ್ನು ಪರಿಶೀಲನೆ ಮಾಡಿದರು. ಇದನ್ನೂ ಓದಿ: SBI ಗ್ರಾಹಕರಿಗೆ ಶಾಕ್ – ಅ.1 ರಿಂದ 4ಕ್ಕಿಂತ ಹೆಚ್ಚು ಬಾರಿ ಕ್ಯಾಶ್ ವಿತ್‌ಡ್ರಾ ಮಾಡಿದ್ರೆ 15 ರೂ. ಶುಲ್ಕ
ಹಾಜರಾತಿ ಪರಿಶೀಲನೆ:
ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಂದ ಕಾಮಗಾರಿ ಸ್ಥಳದಲ್ಲಿ ಒದಗಿಸಲಾಗುತ್ತಿರುವ ಅಗತ್ಯ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಎನ್.ಎಮ್.ಎಮ್.ಎಸ್. ಹಾಜರಾತಿ ಸೆರೆಹಿಡಿಯುವ ಪ್ರಕ್ರಿಯೆನ್ನು ಕಾಯಕ ಬಂಧುಗಳ ಮೊಬೈಲ್ ಮೂಲಕ ವೀಕ್ಷಣೆ ಮಾಡಿದರು.
ಕೂಲಿಕಾರರೊಂದಿಗೆ ಚರ್ಚೆ:
ನಂತರ ಹೊನಗಾ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ಸ್ಥಳೀಯ ಕೂಲಿಕಾರರಿಂದ ಯೋಜನೆಯಡಿ ಕೆಲಸ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಬೇಡಿಕೆ ಸಲ್ಲಿಸಿದ ಎಲ್ಲ ಕೂಲಿಕಾರರಿಗೆ ಕಡ್ಡಾಯವಾಗಿ ಕೆಲಸ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಹಾಗೂ ಯೋಜನೆಯ ಸದುಪಯೋಗ ಪಡೆಯುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಸಹಾಯಕ ನಿರ್ದೇಶಕ ಬಸವಂತಪ್ಪ ಕಡೇಮನಿ ಸೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜಿಪಂ, ಗ್ರಾಪಂ ಸಿಬ್ಬಂದಿ ಹಾಗೂ ಇನ್ನಿತರರು ಹಾಜರಿದ್ದರು.

