ತುಮಕೂರು: ಸರಳತೆ, ಸಜ್ಜನಿಕೆ ಹಾಗೂ ಪ್ರಾಮಾಣಿಕ ರಾಜಕಾರಣಕ್ಕೆ ಹೆಸರಾಗಿದ್ದ ಮಾಜಿ ಸಚಿವ ಬಿ.ಸಿ. ನಾಗೇಶ್(BC Nagesh) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು(Cremation) ಸಕಲ ಸರ್ಕಾರಿ ಗೌರವಗಳೊಂದಿಗೆ, ಬ್ರಾಹ್ಮಣ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು.
ತಿಪಟೂರು(Tiptur) ನಗರದ ಬಿ.ಎಚ್. ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ವಿಪ್ರವೃಂದದವರ ವೇದಮಂತ್ರಘೋಷ ಮತ್ತು ದೇವರ ಸ್ತುತಿಯ ನಡುವೆ ಅಂತಿಮ ವಿಧಿವಿಧಾನಗಳು ಜರುಗಿದವು.
ಪುತ್ರ ವಿಶ್ವದೀಪ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆಯ ಶಾಸ್ತ್ರಗಳನ್ನು ಪೂರೈಸಿದರು. ಪೊಲೀಸ್ ಇಲಾಖೆಯ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ರಾಷ್ಟ್ರಧ್ವಜ ಗೌರವದೊಂದಿಗೆ ಸಕಲ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಇದನ್ನೂ ಓದಿ: ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ – ಪ್ರಾಂಶುಪಾಲರ ವಿರುದ್ಧ FIR
ಅಂತ್ಯಸಂಸ್ಕಾರಕ್ಕೂ ಮುನ್ನ ತಿಪಟೂರಿನ ಕೆ.ಆರ್. ಬಡಾವಣೆಯ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವು ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಆರ್.ಎಸ್.ಎಸ್. ನಿಷ್ಠಾವಂತ ಕಟ್ಟಾಳು, ಪ್ರಾಮಾಣಿಕ ಸಾರ್ವಜನಿಕ ಸೇವಕರಾಗಿದ್ದ ನಾಗೇಶ್ ಅವರ ಅಗಲಿಕೆಗೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದರು.

ಕೆ.ಆರ್. ಬಡಾವಣೆಯ ನಿವಾಸದಿಂದ ಆರಂಭವಾದ ಅಂತಿಮ ಯಾತ್ರೆಯು ದೊಡ್ಡಪೇಟೆ, ಬಿ.ಎಚ್. ರಸ್ತೆ ಮಾರ್ಗವಾಗಿ ರುದ್ರಭೂಮಿಯವರೆಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರು ಹಾಗೂ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿ ಕಣ್ಣೀರಿಟ್ಟರು. ಯಾತ್ರೆಯುದ್ದಕ್ಕೂ “ಭಾರತ ಮಾತಾ ಕೀ ಜೈ” ಮತ್ತು “ಬಿ.ಸಿ. ನಾಗೇಶ್ ಅಮರ್ ರಹೇ” ಎಂಬ ಘೋಷಣೆಗಳು ಮೊಳಗಿದವು.

