– ತಿಂಗಳಲ್ಲಿ 4 ಬಾರಿ ಮೀರಿದ್ರೆ ಪ್ರತಿ ಕ್ಯಾಶ್ ವಿತ್‌ಡ್ರಾಗೆ 15+GST ಚಾರ್ಜ್
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD) ಖಾತೆಗಳಿಗೆ ಅನ್ವಯವಾಗುವ ನಗದು ಹಿಂಪಡೆಯುವ (ಕ್ಯಾಶ್ ವಿತ್‌ಡ್ರಾ) ಶುಲ್ಕದಲ್ಲಿ ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ಶುಲ್ಕವು ಅಕ್ಟೋಬರ್ 1 ರಿಂದಲೇ ಜಾರಿಗೆ ಬರಲಿದೆ.
— State Bank of India (@TheOfficialSBI) August 20, 2026
ಈ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ATM ಗಳಲ್ಲಿ ತಿಂಗಳಿಗೆ 4 ಬಾರಿ ಮಾತ್ರ ನಗದು ಹಿಂಪಡೆಯುವ ವ್ಯವಹಾರಗಳು ಉಚಿತವಾಗಿರಲಿವೆ. 4ಕ್ಕಿಂತ ಹೆಚ್ಚು ಬಾರಿ ಹಣ ತೆಗೆದರೆ ಪ್ರತಿ ನಗದು ಹಿಂಪಡೆಯುವ ವ್ಯವಹಾರಕ್ಕೆ 15 ರೂ. ಜೊತೆಗೆ GST ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ಡಿಜಿಟಲ್ ವಹಿವಾಟುಗಳು ಫ್ರೀ ಫ್ರೀ ಫ್ರೀ
ಎಸ್‌ಬಿಐ ಹೇಳುವಂತೆ, ಹೊಸ ಶುಲ್ಕವು ಎಟಿಎಂಗಳಲ್ಲಿ ನಗದು ಹಿಂಪಡೆಯುವ ವಹಿವಾಟುಗಳಿಗೆ (Bank Transaction) ಮಾತ್ರ ಅನ್ವಯಿಸುತ್ತದೆ. ಡಿಜಿಟಲ್ ವಹಿವಾಟುಗಳು ಯಾವುದೇ ಮಿತಿಯಿಲ್ಲದೇ ಉಚಿತವಾಗಿಯೇ ಮುಂದುವರಿಯಲಿವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಪರಿಷ್ಕೃತ ಶುಲ್ಕವು ಶಾಖೆಯ ಮೂಲಕ ತೆರೆಯಲಾದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಿಗೆ ಅನ್ವಯವಾಗಲಿದ್ದು, ಇದರ Product Code 1011-1701 ಆಗಿದೆ.

ತಿಂಗಳಲ್ಲಿ 4 ಬಾರಿ ಮಾತ್ರ ಕ್ಯಾಶ್ ವಿತ್‌ಡ್ರಾ
ಹೊಸ ನಿಯಮದ ಪ್ರಕಾರ, ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆದಾರರು ತಿಂಗಳಲ್ಲಿ 4 ಬಾರಿ ನಗದು ಹಿಂಪಡೆಯುವಾಗ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ 5ನೇ ವಹಿವಾಟಿನಿಂದ ಪ್ರತಿ ಕ್ಯಾಶ್ ವಿತ್‌ಡ್ರಾಗೆ 15 ರೂ. ಜೊತೆಗೆ GST ಪಾವತಿಸಬೇಕಾಗುತ್ತದೆ.
ಉದಾ: ಒಬ್ಬ ಖಾತೆದಾರರು 1 ತಿಂಗಳಲ್ಲಿ ಆರು ಬಾರಿ ನಗದು ಹಿಂಪಡೆದರೆ, ಮೊದಲ ನಾಲ್ಕು ವಹಿವಾಟುಗಳು ಉಚಿತವಾಗಿರುತ್ತವೆ. ಐದನೇ ಮತ್ತು ಆರನೇ ವಹಿವಾಟಿಗೆ ತಲಾ 15 ರೂ. + GST ಶುಲ್ಕ ವಿಧಿಸಲಾಗುತ್ತದೆ.

SBI BSBD Account ಎಂದರೇನು?
ಎಸ್‌ಬಿಐ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (Basic Savings Bank Deposit Account -BSBD) ಎನ್ನುವುದು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲದೆ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನ ಪಡೆಯಲು ಸಹಾಯ ಮಾಡುವ ಉಳಿತಾಯ ಖಾತೆಯಾಗಿದೆ. ಈ ಖಾತೆಯ ಮೂಲಕ ಹಣ ಠೇವಣಿ ಇಡುವುದು, ನಗದು ಹಿಂಪಡೆಯುವುದು ಸೇರಿದಂತೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.
ಅ.1 ರಿಂದ ಯಾರಿಗೆ ಎಫೆಕ್ಟ್?
ಎಸ್‌ಬಿಐನ ಪರಿಷ್ಕೃತ ನಿಯಮವು ಮುಖ್ಯವಾಗಿ ಶಾಖೆಯ ಮೂಲಕ ತೆರೆಯಲಾದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಲ್ಲಿ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ಹಿಂಪಡೆಯುವ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

