ಹಾಸನ: ಗಾಂಜಾ ನಶೆಯಲ್ಲಿ ಅಮಾಯಕ ಯುವಕನ ಮೇಲೆ ಪುಂಡನೋರ್ವ ಹಲ್ಲೆ ಮಾಡಿರುವ ಘಟನೆ ಆಲೂರು (Alur) ತಾಲೂಕಿನ, ಕಣತೂರು ಗ್ರಾಮದಲ್ಲಿ ನಡೆದಿದೆ.
ಯೋಗೇಶ್ ಹಲ್ಲೆಗೊಳಗಾದ ಯುವಕನಾಗಿದ್ದು, ಸಚಿನ್ ಎಂಬಾತನ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಯೋಗೀಶ್ ಬುಧವಾರ (ಆ.19) ರಾತ್ರಿ ಡೈರಿಗೆ ಹಾಲು ಹಾಕಿ ಮನೆಗೆ ವಾಪಾಸ್ ಬರುತ್ತಿದ್ದಾಗ ಗಾಂಜಾ ನಶೆಯಲ್ಲಿದ್ದ ಸಚಿನ್ ರಸ್ತೆಯಲ್ಲಿ ಯೋಗೀಶ್‌ನನ್ನು ಅಡ್ಡಗಟ್ಟಿ ವಿನಾಕಾರಣ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಗಾಯಾಳು ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಗಾಂಜಾ ಮತ್ತಲ್ಲಿ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ – ವಿಡಿಯೋ ವೈರಲ್
ಜೂ.22 ರಂದು ಸಚಿನ್, ಕಿರಣ್, ಕೀರ್ತನ್, ಓಂಕಾರ ಎಂಬವರು ಕೊಡಗಿಹಳ್ಳಿ ಗ್ರಾಮದಲ್ಲಿ ಗಾಂಜಾ ಸೇವಿಸಿ ಲಾಂಗ್, ಮಚ್ಚುಗಳಿಂದ ದಾಂಧಲೆ ಮಾಡಿ, ಟಿಪ್ಪರ್‌ನಿಂದ ಕಾರು ಜಖಂಗೊಳಿಸಿ ಅಟ್ಟಹಾಸ ಮೆರೆದಿದ್ದರು. ಅವರನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದೆ ಜಾಮೀನು ಪಡೆದು ಎಲ್ಲರೂ ಹೊರಬಂದಿದ್ದರು. ಅದೇ ಗ್ಯಾಂಗ್‌ನ ಸಚಿನ್ ವಿರುದ್ಧ ಈಗ ಹಲ್ಲೆ ಆರೋಪ ಕೇಳಿ ಬಂದಿದೆ.
ಪೊಲೀಸರು ಪುಂಡರ ಮೇಲೆ ಸರಿಯಾದ ರೀತಿ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿದರು ತೆಗೆದುಕೊಳ್ಳುತ್ತಿಲ್ಲ ಎಂದು ಯೋಗೀಶ್ ಆರೋಪಿಸಿದ್ದಾನೆ. ಪುಂಡರ ವಿರುದ್ಧ ಕ್ರಮಕ್ಕೆ ಯುವಕ ಆಗ್ರಹಿಸಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೇಸ್ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆ

