ಆಮ್ಸ್ಟರ್‌ವೀನ್: ತೀವ್ರ ಕುತೂಹಲ ಕೆರಳಿಸಿದ್ದ ಮಹಿಳಾ ಹಾಕಿ ವಿಶ್ವಕಪ್ 2026ರ (Hockey World Cup 2026) ಪೂಲ್ ‘ಡಿ’ ಹಂತದ ಅಂತಿಮ ಹಣಾಹಣಿಯಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಗೋಲುರಹಿತ ಡ್ರಾಕ್ಕೆ ಕಟ್ಟಿಹಾಕಿದ ಭಾರತೀಯ ವನಿತೆಯರ ಪಡೆ ಯಶಸ್ವಿಯಾಗಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.
ಮುಂದಿನ ಹಂತಕ್ಕೇರಲು ಭಾರತಕ್ಕೆ (India Womens) ಈ ಪಂದ್ಯದಲ್ಲಿ ಕೇವಲ ‘ಡ್ರಾ’ ಫಲಿತಾಂಶ ಸಾಕಾಗಿದ್ದರೆ, ಇಂಗ್ಲೆಂಡ್‌ಗೆ ‘ಗೆಲುವು’ ಅನಿವಾರ್ಯವಾಗಿತ್ತು. ಪಂದ್ಯದ ಆರಂಭದಿಂದಲೇ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಸೆಣಸಾಡಿದವು. ಇದನ್ನೂ ಓದಿ: Hockey World Cup| ಭಾರತಕ್ಕೆ ಭರ್ಜರಿ ಜಯ – ಟೂರ್ನಿಯಿಂದಲೇ ಪಾಕ್ ಔಟ್
ಇಂಗ್ಲೆಂಡ್ ತಂಡ ಗೋಲು ಗಳಿಸಲು ನಿರಂತರ ಆಕ್ರಮಣಕಾರಿ ದಾಳಿಗಳನ್ನು ನಡೆಸಿತಾದರೂ, ಭಾರತದ ಬಲಿಷ್ಠ ರಕ್ಷಣಾ ಪಡೆ ಮತ್ತು ಗೋಲ್‌ಕೀಪರ್ ಅವರ ಅದ್ಭುತ ಪ್ರದರ್ಶನ ಎದುರಾಳಿಗಳಿಗೆ ಗೋಲಿನ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ನಿಗದಿತ ಸಮಯ ಮುಕ್ತಾಯದ ವೇಳೆಗೆ ಪಂದ್ಯವು 0-0 ಗೋಲುಗಳಿಂದ ಸಮಬಲದಲ್ಲಿ ಅಂತ್ಯಗೊಂಡಿತು.

ಬಲಿಷ್ಠ ಒಲಿಂಪಿಕ್ಸ್ ಪದಕ ವಿಜೇತ ಚೀನಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ಅಮೋಘ ಹೋರಾಟ ನೀಡಿ ಡ್ರಾ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತೀಯ ಪಡೆ, ದಕ್ಷಿಣ ಆಫ್ರಿಕಾವನ್ನು 6-1 ಗೋಲುಗಳ ಬೃಹತ್ ಅಂತರದ ಜಯ ಸಾಧಿಸಿತ್ತು. ಅಂತಿಮ ಲೀಗ್ ಪಂದ್ಯದಲ್ಲಿ ರಕ್ಷಣಾತ್ಮಕ ಕೌಶಲ ಮೆರೆದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಭಾರತ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ: IND vs SL 1st Test: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ 165 ರನ್ ಗೆಲುವು
ಪೂಲ್ ‘ಡಿ’ ವಿಭಾಗದಲ್ಲಿ ಒಟ್ಟು 7 ಅಂಕಗಳನ್ನು ಕಲೆಹಾಕಿದ ಚೀನಾ ಅಗ್ರಸ್ಥಾನಕ್ಕೇರಿದರೆ, ಭಾರತ 5 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿ ಮುಂದಿನ ಹಂತಕ್ಕೆ ಮುನ್ನಡೆದಿದೆ. ಇನ್ನೊಂದೆಡೆ 1 ಗೆಲುವು, 1 ಡ್ರಾ ಹಾಗೂ 1 ಸೋಲಿನೊಂದಿಗೆ 4 ಅಂಕ ಗಳಿಸಿದ ಇಂಗ್ಲೆಂಡ್ ಮತ್ತು ಯಾವುದೇ ಪಂದ್ಯ ಗೆಲ್ಲದ ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

