– ರಾತ್ರಿ 3 ಗಂಟೆಯಿಂದ ಸುತ್ತಾಡಿದ್ರೂ ಸಿಗಲಿಲ್ಲ ಬೆಡ್
ಬೆಂಗಳೂರು: ಆಸ್ಪತ್ರೆಗಳ ಎಡವಟ್ಟಿನಿಂದ ನಡೆಯುತ್ತಿರುವ ಅಮಾನವೀಯ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಸುಮಾರು ಎಂಟು ಗಂಟೆಗಳ ಕಾಲ ಸುತ್ತಾಡಿದರೂ ಬೆಡ್ ಸಿಗದ ಪರಿಣಾಮ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೆಸಿ ಜರಲ್ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದೆ. ಶ್ರೀರಾಮಪುರದ ನಿವಾಸಿಯಾಗಿರುವ ಗರ್ಭಿಣಿಗೆ ಇಂದು ನಸುಕಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.
ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಮಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಓಡಾಡಿದ್ದಾರೆ. ರಾತ್ರಿ ಮೂರು ಗಂಟೆಯಿಂದಲೂ ಸುತ್ತಾಡಿದರೂ ಎಲ್ಲೂ ಬೆಡ್ ಸಿಗಲಿಲ್ಲ. ನಂತರ ಕೆಸಿ ಜರಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅಲ್ಲಿಯೂ ತಕ್ಷಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ವೈದ್ಯರ ಎಡವಟ್ಟಿನಿಂದ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ಅಮ್ಮನ ಕಾಣುವ ಮುಂಚೆಯೇ ಮಗು ಸಾವನ್ನಪ್ಪಿದೆ.
ಕಡೆಗೆ ಕೆಸಿ ಜನರಲ್ ಆಸ್ಪತ್ರೆಯವರು ಅರ್ಧಗಂಟೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರ ಎಡವಟ್ಟಿಗೆ ಹಸುಗೂಸು ಸಾವನ್ನಪ್ಪಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.