ಬೆಂಗಳೂರು: ಬಿಜೆಪಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ (Yogesh Gowda Murder Case) ದೋಷಿಯಾಗಿರುವ ವಿನಯ್ ಕುಲಕರ್ಣಿ(Vinay Kulkarni) ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ.
ಸಿಆರ್‌ಪಿಸಿ ಸೆಕ್ಷನ್ ಸೆಕ್ಷನ್ 302 (ಕೊಲೆ), 120B (ಕ್ರಿಮಿನಲ್ ಪಿತೂರಿ), ಸೆಕ್ಷನ್ 201 (ಸಾಕ್ಷ್ಯ ನಾಶ), ಸೆಕ್ಷನ್ 148 (ಮಾರಕಾಸ್ತ್ರಗಳೊಂದಿಗೆ ಗಲಭೆ), ಸೆಕ್ಷನ್ 149 (ಗುಂಪಿನ ಸದಸ್ಯ) ಅಡಿ ಆರೋಪಗಳು ಸಾಬೀತಾಗಿದೆ ಎಂದು ಜನಪ್ರತಿನಿಧಿಗಳ ಕೋರ್ಟ್ ಹೇಳಿದೆ.
ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ. ಒಂದು ವೇಳೆ ಕೋರ್ಟ್ ಈ ಅಪರಾಧಕ್ಕಾಗಿ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆ ವಿಧಿಸಿದರೆ ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ ವಿನಯ್ ಕುಲಕರ್ಣಿ ತಕ್ಷಣವೇ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.
ಒಂದು ವೇಳೆ ಶಾಸಕರು ಹೈಕೋರ್ಟ್‌ಗೆ ಹೋಗಿ ತಮ್ಮ ಶಿಕ್ಷೆಗೆ ತಡೆ (Stay on Conviction) ತಂದರೆ ಮಾತ್ರ ಅವರ ಶಾಸಕ ಸ್ಥಾನ ಮರಳಿ ಸಿಗುವ ಸಾಧ್ಯತೆ ಇರುತ್ತದೆ. ಕೇವಲ ಜಾಮೀನು (Bail) ಸಿಕ್ಕರೆ ಸಾಲದು, ಶಿಕ್ಷೆಗೆ ಕೋರ್ಟ್ ತಡೆ ನೀಡಬೇಕಾಗುತ್ತದೆ.
ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರದ 6 ವರ್ಷಗಳ ಕಾಲ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಂದರೆ ಒಟ್ಟು 8 ವರ್ಷಗಳ ಕಾಲ(ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಿದರೆ + 6 ವರ್ಷ ನಿಷೇಧ) ರಾಜಕೀಯದಿಂದ ದೂರವಿರಬೇಕಾಗುತ್ತದೆ. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ
ಯಾವ ಸೆಕ್ಷನ್‌ಗೆ ಏನು ಶಿಕ್ಷೆ?
302 (ಕೊಲೆ) – ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡ.
120B (ಕ್ರಿಮಿನಲ್ ಪಿತೂರಿ) – ಕೊಲೆಯಂತಹ ಗಂಭೀರ ಅಪರಾಧಕ್ಕೆ ಪಿತೂರಿ ನಡೆಸಿದ್ದರೆ, ಕೊಲೆಗೆ ನೀಡಲಾಗುವಷ್ಟೇ ಶಿಕ್ಷೆ (ಜೀವಾವಧಿ ಅಥವಾ ಮರಣದಂಡನೆ).
201 (ಸಾಕ್ಷ್ಯ ನಾಶ) – ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದರೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ.
148 (ಮಾರಕಾಸ್ತ್ರಗಳೊಂದಿಗೆ ಗಲಭೆ) – ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ
149 (ಗುಂಪಿನ ಸದಸ್ಯ) – ಗುಂಪಿನ ಪ್ರತಿಯೊಬ್ಬ ಸದಸ್ಯನಿಗೂ ಆ ಗುಂಪು ಎಸಗಿದ ಮೂಲ ಅಪರಾಧಕ್ಕೆ ಅನ್ವಯಿಸುವಷ್ಟೇ ಶಿಕ್ಷೆ ವಿಧಿಸಲಾಗುತ್ತದೆ (ಉದಾಹರಣೆಗೆ ಕೊಲೆಯ ಗುಂಪಿನಲ್ಲಿದ್ದರೆ 302ರ ಅಡಿ ಶಿಕ್ಷೆ)
ವಿನಯ್ ಕುಲಕರ್ಣಿ ಅವರ ಪ್ರಕರಣದಲ್ಲಿ ಕೊಲೆ (302) ಮತ್ತು ಪಿತೂರಿ (120B) ಆರೋಪಗಳು ಸಾಬೀತಾಗಿರುವುದಿಂದ ಶಿಕ್ಷೆಯ ಪ್ರಮಾಣ ಸಾಮಾನ್ಯವಾಗಿ 2 ವರ್ಷಕ್ಕಿಂತ ಹೆಚ್ಚೇ ಇರುವ ಸಾಧ್ಯತೆಯಿದೆ.

