ನವದೆಹಲಿ: ಭಾರತದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಈ ವಾರಾಂತ್ಯದಲ್ಲಿ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ ಎಂದು ಚೀನಾ (China) ಸರ್ಕಾರ ಖಚಿತಪಡಿಸಿದೆ. ಹಲವು ದಿನಗಳಿಂದ ಇದ್ದ ರಾಜತಾಂತ್ರಿಕ ಅನಿಶ್ಚಿತತೆಗೆ ಅಂತ್ಯ ಹಾಡಿದೆ.
ಭಾರತ ಗಣರಾಜ್ಯದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆಪ್ಟೆಂಬರ್ 12 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 18 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಇದಕ್ಕೂ ಮುನ್ನ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾ-ಕುನ್, ಕ್ಸಿ ಅವರ ಭಾರತ ಭೇಟಿಯ ಕುರಿತು ಯಾವುದೇ ದೃಢೀಕರಣವನ್ನು ನೀಡಲು ನಿರಾಕರಿಸಿದ್ದರು.
2020 ರ ಗಾಲ್ವಾನ್ ಕಣಿವೆಯ ಗಡಿ ಘರ್ಷಣೆಯಲ್ಲಿ 20 ಭಾರತೀಯರು ಮತ್ತು ಅಪರಿಚಿತ ಸಂಖ್ಯೆಯ ಚೀನೀ ಸೈನಿಕರು ಸಾವನ್ನಪ್ಪಿದ ನಂತರ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಇದಕ್ಕೂ ಮೊದಲು ಕ್ಸಿ ಕೊನೆಯ ಬಾರಿಗೆ ಭಾರತಕ್ಕೆ 2019 ರಲ್ಲಿ ಭೇಟಿ ನೀಡಿದ್ದರು. ಚೆನ್ನೈ ಬಳಿಯ ಮಾಮಲ್ಲಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ್ದರು. ಅದಾದ ಏಳು ವರ್ಷಗಳ ಬಳಿಕ ಕ್ಸಿ ಅವರ ಮೊದಲ ಭಾರತ ಭೇಟಿ ಇದಾಗಿದೆ.
ಕ್ಸಿ ಮೊದಲ ಬಾರಿಗೆ 2014ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದರು. ಆಗ ಇಬ್ಬರೂ ನಾಯಕರು ಅಧಿಕಾರ ವಹಿಸಿಕೊಂಡಿದ್ದರು. ನಂತರ 2016 ರಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಗೋವಾಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರತಿ ಅಮೆರಿಕದ ಪ್ರಜೆಗೆ 4.75 ಲಕ್ಷ – ಟ್ರಂಪ್ ಗ್ಯಾರಂಟಿ
ಇತ್ತೀಚಿನ ವರ್ಷಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಿವೆ. ಪ್ರಧಾನಿ ಮೋದಿ ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ್ದರು. ಅಲ್ಲದೇ, ಈ ಎರಡೂ ರಾಷ್ಟ್ರಗಳು ಅಮೆರಿಕದೊಂದಿಗೆ ಅಸ್ಥಿರ ಸಂಬಂಧಗಳನ್ನು ಎದುರಿಸುತ್ತಿವೆ. ಹೀಗಾಗಿ, ಚೀನಾ-ಭಾರತದ ನಡುವಿನ ಸಂಬಂಧ ಸುಧಾರಿಸಿದೆ. 2020 ರ ಘರ್ಷಣೆಗಳ ನಂತರ ಭಾರತವು ಚೀನಾದ ಹೂಡಿಕೆಯ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿದೆ. ಎಲೆಕ್ಟ್ರಾನಿಕ್ಸ್, ಬಂಡವಾಳ ಸರಕುಗಳು ಮತ್ತು ಸೌರ ಕೋಶ ವಲಯಗಳಲ್ಲಿ ಕೆಲವು ರಿಯಾಯಿತಿ ನೀಡಿದೆ.

