ವಾಷಿಂಗ್ಟನ್: ಭಾರತದ ಚುನಾವಣೆಯಲ್ಲಿ ಪಕ್ಷಗಳು ಉಚಿತ ಆಫರ್, ಹಣ ನೀಡುವ ಘೋಷಣೆ ಪ್ರಕಟಿಸುವ ಟ್ರೆಂಡ್ ಈಗ ಸಾಮಾನ್ಯ. ಆದರೆ ಈಗ ಅಮೆರಿಕಕ್ಕೂ ಈ ಟ್ರೆಂಡ್ ಕಾಲಿಟ್ಟಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಧ್ಯಂತರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಅಮೆರಿಕದ ಪ್ರಜೆಗೆ 5 ಸಾವಿರ ಡಾಲರ್(4.75 ಲಕ್ಷ ರೂ.) ನೀಡಲಾಗುವುದು ಎಂದು ಬಂಪರ್ ಆಫರ್ ಪ್ರಕಟಿಸಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ) ಎರಡರಲ್ಲೂ ಬಹುಮತ ಉಳಿಸಿಕೊಂಡರೆ, ದೇಶದ ಪ್ರತಿಯೊಬ್ಬ ವಯಸ್ಕ ಪ್ರಜೆಗೂ(American Adult) 5,000 ಡಾಲರ್‌ಗೆ ಹೆಚ್ಚು ಡಿವಿಡೆಂಡ್ ನೀಡುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರಥಮ ಮಧ್ಯಂತರ ಸಮಾವೇಶದಲ್ಲಿ ಸುಮಾರು 1 ಗಂಟೆ 45 ನಿಮಿಷಗಳ ಕಾಲ ಭಾಷಣ ಮಾಡಿದ ಟ್ರಂಪ್, “ರಿಪಬ್ಲಿಕನ್‌ಗಳು ಉಭಯ ಸದನಗಳಲ್ಲೂ ಜಯಭೇರಿ ಬಾರಿಸಿದರೆ, ಪ್ರತಿಯೊಬ್ಬ ಅಮೆರಿಕನ್ ವಯಸ್ಕ ನಾಗರಿಕನಿಗೆ 5,000 ‘ಟ್ರಂಪ್ ಡಿವಿಡೆಂಡ್’ ವಿತರಿಸುತ್ತೇನೆ . ಇದು ನನ್ನ ವಾಗ್ದಾನ” ಎಂದು ಹೇಳುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
Trump promises $5,000 to every American adult if Republicans retain control of Congress in Novemberhttps://t.co/SUZfUimpdu pic.twitter.com/1ZIGzc3vKA
— AFP News Agency (@AFP) September 10, 2026
ಕಂಪನಿಗಳು ಷೇರುದಾರರಿಗೆ ಡಿವಿಡೆಂಡ್ ನೀಡುವಂತೆ ಈ ಹಣವನ್ನು ವಿತರಿಸಲಾಗುವುದು ಎಂದು ಟ್ರಂಪ್ ಹೇಳಿಕೊಂಡಿದ್ದರೂ, ಈ ಬೃಹತ್ ಯೋಜನೆಗೆ ಹಣ ಹೇಗೆ ಕ್ರೋಡೀಕರಿಸಲಾಗುತ್ತದೆ ಮತ್ತು ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಮೆರಿಕದಲ್ಲಿ ಸರಿಸುಮಾರು 27 ಕೋಟಿ ವಯಸ್ಕರಿದ್ದು, ಈ ಭರವಸೆಯನ್ನು ಈಡೇರಿಸಲು ಬರೋಬ್ಬರಿ 1.35 ಟ್ರಿಲಿಯನ್ ಡಾಲರ್(128.55 ಲಕ್ಷ ಕೋಟಿ ರೂ.) ಹಣದ ಅಗತ್ಯವಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಚುನಾವಣೆ ಮುಗಿದ ತಕ್ಷಣವೇ ಇರಾನ್ ಯುದ್ಧ ಅಂತ್ಯ: ಟ್ರಂಪ್
ಡೆಮಾಕ್ರಟ್‌ಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಟ್ರಂಪ್, ನಾವು ಅಮೆರಿಕದ ಭವಿಷ್ಯವನ್ನು ತೀವ್ರ ಎಡಪಂಥೀಯ ಡೆಮಾಕ್ರಟ್‌ಗಳ ಕೈಗೊಪ್ಪಿಸಿದರೆ, ದೇಶವು ಮತ್ತೆ ಮೊದಲಿನ ಸ್ಥಿತಿಗೆ ಮರಳಲು ಮುಂದಿನ ಒಂದು ದಶಕವನ್ನೇ ವ್ಯಯಿಸಬೇಕಾಗುತ್ತದೆ. ರಿಪಬ್ಲಿಕನ್ನರಿಗೆ ಮತ ನೀಡಿ ನಾವು ವಿಶ್ವವೇ ಬೆರಗಾಗುವಂತೆ ಮುನ್ನಡೆಯುತ್ತೇವೆ ಎಂದು ಮತದಾರರಿಗೆ ಕರೆ ನೀಡಿದ್ದಾರೆ.

