ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗುಲಿ ಕಾರ್ಮಿಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಇದೀಗ ನಾಲ್ವರು ಬಿಎಂಆರ್‌ಸಿಎಲ್ ಅಧಿಕಾರಿಗಳ (BMRCL Officers) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೃತ ಕಾರ್ಮಿಕ ಗುರುವಪ್ಪ ಮಗ ಮೂರ್ತಿ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ (Halasuru Police Station) ದೂರು ದಾಖಲಿಸಿದ್ದು, ಕೆಲಸದ ವೇಳೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗುಲಿ ಕಾರ್ಮಿಕ ದುರ್ಮರಣ
ದೂರಿನ ಆಧಾರದ ಮೇಲೆ ಗುತ್ತಿಗೆ ಕಂಪನಿಯ ಸೂರಜ್, ಗುತ್ತಿಗೆ ಪಡೆದ ಕಂಪನಿಯ ಇನ್‌ಚಾರ್ಜ್ ರಾಜೇಶ್, ಗುತ್ತಿಗೆ ಪಡೆದ ಕಂಪನಿಯ ವ್ಯವಸ್ಥಾಪಕ ಮಾನಸ ಹಾಗೂ ಇನ್ನೋರ್ವ ಬಿಎಂಆರ್‌ಸಿಎಲ್ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಶುಕ್ರವಾರ (ಜೂ.26) ಮಧ್ಯಾಹ್ನ 3:52ರ ಸುಮಾರಿಗೆ ಈ ಘಟನೆ ನಡೆದಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದ (Trinity Metro Station) ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಭೂಮಿಯಲ್ಲಿ ಅರ್ಥ್ ಪಿಟ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುರುವಪ್ಪ ಎಂಬ ಕಾರ್ಮಿಕನಿಗೆ ಕರೆಂಟ್ ಶಾಕ್ ತಗುಲಿದೆ. ಕೂಡಲೇ ಕಾರ್ಮಿಕನನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪವಷ್ಟರಲ್ಲೇ ಕಾರ್ಮಿಕ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದರು.ಇದನ್ನೂ ಓದಿ: ನೋಯ್ಡಾದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬೃಹತ್ ಕಟ್ಟಡ
