ಬೆಂಗಳೂರು: ನಮ್ಮ ಮೆಟ್ರೋ (Namma Metro) ಪಿಲ್ಲರ್‌ಗಳಿಗೆ ಬೆಳಕಿನ ವ್ಯವಸ್ಥೆವಾಗಿ ನಡೆಯುತ್ತಿದ್ದ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಟ್ರಿನಿಟಿ ಮೆಟ್ರೋ ನಿಲ್ದಾಣದ (Trinity Metro Station) ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಜಿಗಣಿ ಸಮೀಪದ ಮುತ್ತುರಾಯಸ್ವಾಮಿ ದೊಡ್ಡಿ ನಿವಾಸಿ ಗುರಪ್ಪ (56) ಎಂದು ಗುರುತಿಸಲಾಗಿದ್ದು, ಎಂ/ಎಸ್ ಎಂ.ಆರ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ಲೇಯಿಂಗ್-11 ನಿಂದ ಹೊರಬಿದ್ದ ವೈಭವ್ ಸೂರ್ಯವಂಶಿ – ಅಚ್ಚರಿ ಹೇಳಿಕೆ ಕೊಟ್ಟ ಅಯ್ಯರ್
ಶುಕ್ರವಾರ (ಜೂ.26) ಮಧ್ಯಾಹ್ನ 3:52ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಭೂಮಿಯಲ್ಲಿ ಅರ್ಥ್ ಪಿಟ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕನಿಗೆ ಕರೆಂಟ್ ಶಾಕ್ ತಗುಲಿದೆ. ಕೂಡಲೇ ಕಾರ್ಮಿಕನನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪವಷ್ಟರಲ್ಲೇ ಕಾರ್ಮಿಕ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಸಂಬಂಧಿತ ಅಧಿಕಾರಿಗಳು ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬದವರಿಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಬೀಜಿಂಗ್‌ನ ಎತ್ತರದ ಕಟ್ಟಡಕ್ಕೆ ಅಪ್ಪಳಿಸಿದ ಚೀನಾ ವಿಮಾನ – ತುಂಡುಗಳಾಗಿ ನೆಲಕ್ಕೆ ಬಿದ್ದ ಫ್ಲೈಟ್, ವಿಡಿಯೋ ವೈರಲ್
