ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ಡೀಸೆಲ್ (Diesel) ದರ ಏರಿಕೆ ಹಿನ್ನೆಲೆ ಸರ್ಕಾರಿ ಬಸ್(KSRTC) ಪ್ರಯಾಣ ದರ ಹೆಚ್ಚಳದ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಈಗಾಗಲೇ ಬಸ್ ಟಿಕೆಟ್(Bus Ticket) ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ( D K Shivakumar), ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದರು. ಡಿಪೋಗಳಲ್ಲಿ ಸಿಗುವ ಡೀಸೆಲ್ ಬೆಲೆ ಮತ್ತು ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಸಿಗುವ ಬೆಲೆ ನಡುವೆ ದೊಡ್ಡ ಅಂತರವಿದೆ ಎಂದರು.
ಡೀಸೆಲ್ ದರ ಹೆಚ್ಚಳದಿಂದ ಸಾರಿಗೆ ನಿಗಮಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿಯನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇ ಸಮಯದಲ್ಲಿ ಜನರ ಮೇಲೂ ಹೆಚ್ಚಿನ ಹೊರೆ ಬೀಳಬಾರದು. ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ: ಉಪಲೋಕಾಯುಕ್ತರ ಭೇಟಿ ವೇಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಲಕ್ಷಾಂತರ ಹಣ ಪತ್ತೆ
ಸರ್ಕಾರದ ಮಾಹಿತಿ ಪ್ರಕಾರ, ಡಿಪೋಗಳಲ್ಲಿ ಖರೀದಿಸುವ ಡೀಸೆಲ್ ಮತ್ತು ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಡೀಸೆಲ್ ದರದ ನಡುವೆ ಸುಮಾರು ₹40 ವ್ಯತ್ಯಾಸವಿದೆ. ಇದರಿಂದ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಡಿಪೋಗಳಿಂದ ಡೀಸೆಲ್ ಖರೀದಿಸುವುದನ್ನೇ ನಿಲ್ಲಿಸಿವೆ ಎನ್ನಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ದರ ಏರಿಕೆಯಾದರೆ ಸ್ವಯಂಚಾಲಿತವಾಗಿ ಬಸ್ ದರ ಹೆಚ್ಚಿಸುವ ವ್ಯವಸ್ಥೆ ಇತ್ತು. ಈಗಲೂ ಇದೇ ರೀತಿಯ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.
ಪ್ರಧಾನಮಂತ್ರಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಕರೆ ನೀಡಿರುವ ಹಿನ್ನೆಲೆ, ರಾಜ್ಯದ ಹಿತ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬಸ್ ಪ್ರಯಾಣದ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಜನರು ಈಗ ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.ಇದನ್ನೂ ಓದಿ: ಅಲ್ಲಲ್ಲಿ ವರುಣಾರ್ಭಟ – ಮುಂದಿನ 3 ಗಂಟೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ
