ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೆಡೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ(Congress) ಅಧಿಕಾರ ಹಂಚಿಕೆ ಹಾಗೂ ಕುರ್ಚಿ ಕದನ ಜೋರಾಗಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷವಾದ ಜೆಡಿಎಸ್‌ನಲ್ಲಿ (JDS) ಘರ್‌ವಾಪ್ಸಿ ಅಭಿಯಾನ ಬಿರುಸುಗೊಂಡಿದೆ. ಹಳೇ ಮೈಸೂರು ಭಾಗ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿರುವ ಹೆಚ್.ಡಿ. ಕುಮಾರಸ್ವಾಮಿ, ಈ ಹಿಂದೆ ಪಕ್ಷ ತೊರೆದಿದ್ದ ಪ್ರಭಾವಿ ನಾಯಕರನ್ನು ಮರಳಿ ಕರೆತರಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಇದರ ಮೊದಲ ಭಾಗವಾಗಿ, ಪುಲಕೇಶಿ ನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ(Akhanda Srinivas Murthy) ಅವರು ಶೀಘ್ರದಲ್ಲೇ ಜೆಡಿಎಸ್ ಬುಟ್ಟಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸುದೀರ್ಘ ಸಮಾಲೋಚನೆ ನಡೆಸಿ ಪಕ್ಷಕ್ಕೆ ವಾಪಸ್ ಆಗುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಆತ್ಮೀಯರು ಹಾಗೂ ಮಾಜಿ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ @JanataDal_S ಪಕ್ಷದ ಹಿರಿಯ ಮುಖಂಡರೊಂದಿಗೆ ಗೌರವಪೂರ್ವಕವಾಗಿ ಭೇಟಿ ನೀಡಲಾಯಿತು. ಕೋಲಾರ ಲೋಕಸಭೆ ಕ್ಷೇತ್ರದ ಸಂಸದರಾದ ಶ್ರೀ ಮಲ್ಲೇಶ್ ಬಾಬು ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್.ಎಂ. ರಮೇಶ್ ಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯರಾದ… pic.twitter.com/CP7w3EprrP
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) May 19, 2026
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ (Congress) ಟಿಕೆಟ್ ಸಿಗದೆ ಆಕ್ರೋಶಗೊಂಡಿದ್ದ ಅಖಂಡ, ಬಳಿಕ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪುಲಕೇಶಿ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲದಿರುವುದು ಮತ್ತು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿರುವ ಹಿನ್ನೆಲೆಯಲ್ಲಿ, ಜೆಡಿಎಸ್‌ನಿಂದ ಸ್ಪರ್ಧಿಸುವುದೇ ಸುರಕ್ಷಿತ ಎಂಬ ಲೆಕ್ಕಾಚಾರಕ್ಕೆ ಅಖಂಡ ಬಂದಿದ್ದಾರೆ ಎನ್ನಲಾಗಿದೆ.
ಸದ್ಯ ಅಖಂಡ ಶ್ರೀನಿವಾಸ್ ಮೂರ್ತಿ ಅವರು ತಮ್ಮ ಹಳೇ ಕ್ಷೇತ್ರವಾದ ಪುಲಕೇಶಿ ನಗರ ಅಥವಾ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ ಕ್ಷೇತ್ರದಿಂದ ಕಣಕ್ಕಿಳಿಯಲು ತೀವ್ರ ಆಸಕ್ತಿ ತೋರಿಸಿದ್ದಾರೆ.
ಕೇವಲ ಹಳೇ ಮೈಸೂರು ಭಾಗ ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲೂ ವಲಸೆ ಹೋದ ನಾಯಕರಿಗೆ ಜೆಡಿಎಸ್ ಮಣೆ ಹಾಕುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಇಕ್ಬಾಲ್ ಅನ್ಸಾರಿ ಅವರು ಕೂಡ ಸದ್ಯದಲ್ಲೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.

