ಕಾರವಾರ: ಗೋವಾದಿಂದ ಕಾರವಾರಕ್ಕೆ (Goa) ಅಕ್ರಮವಾಗಿ ಗಾಂಜಾ ( Karwar) ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ, ನಗದು, ಡಿಜಿಟಲ್ ವೇಯಿಂಗ್ ಮಿಷನ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಮೊದಲ ಹಂತವಾಗಿ ಕಾರವಾರ ತಾಲೂಕಿನ ಸದಾಶಿವಗಡ ತಾರೀವಾಡದ ನಾಗರಾಜ್ (26) ಹಾಗೂ ವಿನೋದ್ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ಆರೋಪಿಗಳಿಂದ 465 ಗ್ರಾಂ ತೂಕದ 25 ಸಾವಿರ ಮೌಲ್ಯದ ಗಾಂಜಾ, ಒಂದು ಬೈಕ್ ಹಾಗೂ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಈ ಬಂಧನದ ಬಳಿಕ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಗಾಂಜಾ ಸರಬರಾಜಿನ ಮೂಲವನ್ನು ಪತ್ತೆಹಚ್ಚಿದರು. ಬಳಿಕ ಗೋವಾದ ಕಾಣಕೋಣದ ಕೊಳಮ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದರು.

ದಾಳಿ ವೇಳೆ 846 ಗ್ರಾಂ ತೂಕದ 48 ಸಾವಿರ ಮೌಲ್ಯದ ಗಾಂಜಾ, 10,800 ನಗದು, ಡಿಜಿಟಲ್ ವೇಯಿಂಗ್ ಮಿಷನ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಮಹಿಳೆಯರಿಗೆ ನೋಟಿಸ್ ನೀಡಲಾಗಿದೆ.ಇದನ್ನೂ ಓದಿ: ಬರದನಾಡಲ್ಲಿ ಅಣಬೆ ಬೇಟೆ – ಆಷಾಢ, ಶ್ರಾವಣ ಮಾಸದಲ್ಲಿ ಕಾಡಂಚಿನ ಜನರಿಗೆ ಅಣಬೆ ಹುಡುಕೋದೇ ಹವ್ಯಾಸ
ಎಸ್ಪಿ ಎಂ.ಎನ್. ದೀಪನ್, ಎಎಸ್ಪಿ ಜಿ. ಕೃಷ್ಣಮೂರ್ತಿ, ಕಾರವಾರ ಉಪವಿಭಾಗದ ಡಿವೈಎಸ್‌ಪಿ ಗಿರೀಶ್ ಎಸ್.ವಿ. ಹಾಗೂ ಕಾರವಾರ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ಯು.ಹೆಚ್. ಸಾತೇನಹಳ್ಳಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಪೊಲೀಸ್ ಉಪನಿರೀಕ್ಷಕರಾದ ನೇಹಾಲ್ ಖಾನ್, ಪ್ರಮೀಲಾ ವೈ. ನಾಯ್ಕ ಹಾಗೂ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.ಇದನ್ನೂ ಓದಿ: FIR ಹಿಂಪಡೆಯದಿದ್ದರೆ ಮತ್ತೆ ದೇಶವ್ಯಾಪಿ ಪ್ರತಿಭಟನೆ: CJP ಹೊಸ ವಾರ್ನಿಂಗ್
