ದೇಶಾದ್ಯಂತ ತೀವ್ರ ಬಿಸಿಗಾಳಿ ಮತ್ತು ಗರಿಷ್ಠ ತಾಪಮಾನದಿಂದ ಜನರು ತತ್ತರಿಸುತ್ತಿರುವ ನಡುವೆಯೇ ತಂಪು ವಾತಾವರಣ ತರಬೇಕಿದ್ದ ನೈಋತ್ಯ ಮುಂಗಾರು (Mansoon Rain) ಈ ಬಾರಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಆರಂಭದಲ್ಲಿ ಮೇ 26ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದ್ದರೂ, ಬದಲಾಗಿರುವ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಗಾರು ಆಗಮನ ಮುಂದೂಡಿಕೆಯಾಗಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೆ ಈ ಬಾರಿ ಮುಂಗಾರು 6 ದಿನ ಮುಂಚಿತವಾಗಿ ಆಗಮಿಸಬಹುದು ಎಂದು ಹೇಳಲಾಗಿತ್ತು. ಇದೀಗ ಜೂನ್ ಮೊದಲ ವಾರದಲ್ಲಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಿದ್ರೆ ಕೇರಳದಿಂದಲೇ (Kerala) ಮುಂಗಾರು ಪ್ರವೇಶ ಏಕೆ? ಬೇರೆ ರಾಜ್ಯಗಳಿಗೆ ಪ್ರಸರಣ ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಮುಂಗಾರು ಆರಂಭ ನಿರ್ಧಾರ ಹೇಗೆ?
ಕೇರಳದಲ್ಲಿರುವ 14 ಹವಾಮಾನ ಕೇಂದ್ರಗಳ ಪೈಕಿ ಕನಿಷ್ಠ 60 ಶೇಕಡಾ ಕೇಂದ್ರಗಳಲ್ಲಿ 2.5 ಮಿ.ಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿರಬೇಕು. ಜೊತೆಗೆ ಪಶ್ಚಿಮ ದಿಕ್ಕಿನಿಂದ ಬಲವಾದ ತೇವಾಂಶಭರಿತ ಗಾಳಿಗಳು ಬೀಸುತ್ತಿರಬೇಕು. ಈ ಮಾನದಂಡಗಳು ಪೂರೈಸಿದಾಗ ಮಾತ್ರ ಕೇರಳದಲ್ಲಿ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸುತ್ತದೆ.
ಕೇರಳದಿಂದಲೇ ಮುಂಗಾರು ಪ್ರವೇಶ ಏಕೆ?
ಪ್ರತಿ ವರ್ಷ ಭಾರತದ ಮುಂಗಾರು ಮೊದಲು ಕೇರಳವನ್ನು ತಲುಪುವುದಕ್ಕೆ ಭೌಗೋಳಿಕ ಮತ್ತು ಹವಾಮಾನ ಸಂಬಂಧಿತ ಕಾರಣಗಳಿವೆ. ಬೇಸಿಗೆಯಲ್ಲಿ ಭಾರತದ ಭೂಭಾಗ ಹೆಚ್ಚು ಬಿಸಿಯಾಗುವುದರಿಂದ ಕಡಿಮೆ ವಾಯು ಒತ್ತಡ ಉಂಟಾಗುತ್ತದೆ. ಇದರಿಂದ ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮೇಲಿರುವ ತೇವಾಂಶಯುಕ್ತ ತಣ್ಣನೆಯ ಗಾಳಿಗಳು ಭೂಭಾಗದತ್ತ ಚಲಿಸುತ್ತವೆ.
ಈ ಗಾಳಿಗಳು ನೈಋತ್ಯ ದಿಕ್ಕಿನಿಂದ ಬೀಸುವುದರಿಂದ ಅವು ಮೊದಲು ಕೇರಳ ತೀರವನ್ನು ತಲುಪುತ್ತವೆ. ಹೀಗಾಗಿ ಭಾರತದ ಮಳೆಗಾಲದ ಆರಂಭ ಕೇರಳದಿಂದಲೇ ಆಗುತ್ತದೆ.
ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಪಾತ್ರ:
ಕೇರಳ ಮತ್ತು ತಮಿಳುನಾಡು ಭಾಗಕ್ಕೆ ಪ್ರವೇಶಿಸುವ ಮುಂಗಾರು ಮಾರುತಗಳು ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಿಂದ ಹೆಚ್ಚಿನ ತೇವಾಂಶವನ್ನು ಪಡೆದುಕೊಳ್ಳುತ್ತವೆ. ಈ ಸಮುದ್ರ ಪ್ರದೇಶಗಳಲ್ಲಿ ಉಂಟಾಗುವ ಒತ್ತಡದ ವ್ಯತ್ಯಾಸಗಳು ಮುಂಗಾರು ಮಾರುತಗಳನ್ನು ಮತ್ತಷ್ಟು ಬಲಪಡಿಸಿ ಭಾರತದ ಒಳನಾಡಿನತ್ತ ಮುನ್ನಡೆಸುತ್ತವೆ.
ದೇಶದಾದ್ಯಂತ ಮುಂಗಾರು ಹೇಗೆ ಹರಡುತ್ತದೆ?
ಭಾರತದ ದಕ್ಷಿಣ ತುದಿಯನ್ನು ತಲುಪಿದ ನಂತರ ಮುಂಗಾರು ಎರಡು ಪ್ರಮುಖ ಶಾಖೆಗಳಾಗಿ ವಿಭಜನೆಯಾಗುತ್ತದೆ.
ಅರಬ್ಬೀ ಸಮುದ್ರ ಶಾಖೆ:
ಈ ಶಾಖೆ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ಕಡೆಗೆ ಚಲಿಸುತ್ತದೆ. ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸುವ ತೇವಾಂಶಭರಿತ ಗಾಳಿಗಳು ಭಾರೀ ಮಳೆಗೆ ಕಾರಣವಾಗುತ್ತವೆ.
ಬಂಗಾಳ ಕೊಲ್ಲಿ ಶಾಖೆ:
ಈ ಶಾಖೆ ತಮಿಳುನಾಡು ಭಾಗದಿಂದ ಪೂರ್ವ ಮತ್ತು ಈಶಾನ್ಯ ಭಾರತದತ್ತ ಸಾಗುತ್ತದೆ. ನಂತರ ಬಾಂಗ್ಲಾದೇಶ ಮತ್ತು ಮೇಘಾಲಯದ ಖಾಸಿ ಬೆಟ್ಟಗಳಿಗೆ ಅಪ್ಪಳಿಸಿ ಭಾರೀ ಮಳೆ ಸುರಿಸುತ್ತದೆ. ಹಿಮಾಲಯ ಪರ್ವತಗಳು ಈ ಮಾರುತಗಳನ್ನು ತಡೆಯುವುದರಿಂದ ಅವು ಪಶ್ಚಿಮದತ್ತ ತಿರುಗಿ ಉತ್ತರ ಹಾಗೂ ಮಧ್ಯ ಭಾರತದ ಪ್ರದೇಶಗಳಿಗೆ ಮಳೆ ತರುತ್ತವೆ.
ಜಗತ್ತಿನ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ:
ಮೇಘಾಲಯದ ಮೌಸಿನ್ರಾಮ್ ಮತ್ತು ಚಿರಾಪುಂಜಿ ಪ್ರದೇಶಗಳು ಜಗತ್ತಿನ ಅತೀ ಹೆಚ್ಚು ಮಳೆ ಬೀಳುವ ಸ್ಥಳಗಳಾಗಿವೆ. ಇಲ್ಲಿ ವರ್ಷಕ್ಕೆ 11,000 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗುತ್ತದೆ.
ಅತೀ ಕಡಿಮೆ ಮಳೆ ಬೀಳುವ ಪ್ರದೇಶ :
ರಾಜಸ್ಥಾನದ ಜೈಸಲ್ಮೀರ್ ಪ್ರದೇಶವು ಭಾರತದ ಅತೀ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿದೆ. ಮುಂಗಾರು ಮಾರುತಗಳು ಈ ಭಾಗವನ್ನು ಪರಿಣಾಮಕಾರಿಯಾಗಿ ತಲುಪದ ಕಾರಣ ಇಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಿರುತ್ತದೆ.
ಎಲ್ ನಿನೊ ಆತಂಕ:
ಹವಾಮಾನ ತಜ್ಞರ ಪ್ರಕಾರ ಈ ಬಾರಿ ಎಲ್ ನಿನೊ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ ನಿನೊ ಪರಿಣಾಮದಿಂದ ಭಾರತದಲ್ಲಿ ಮುಂಗಾರು ದುರ್ಬಲವಾಗುವ ಹಾಗೂ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ.
ಭಾರತದ ಆರ್ಥಿಕತೆಗೆ ಮುಂಗಾರು ಏಕೆ ಮುಖ್ಯ?
ಭಾರತದಲ್ಲಿ ಒಟ್ಟು ವಾರ್ಷಿಕ ಮಳೆಯ ಸುಮಾರು 70 ಶೇಕಡಾ ಭಾಗ ಮುಂಗಾರಿನಲ್ಲೇ ಸುರಿಯುತ್ತದೆ. ದೇಶದ ಅರ್ಧಕ್ಕಿಂತ ಹೆಚ್ಚು ಕೃಷಿಭೂಮಿಗೆ ನೀರಾವರಿ ಸೌಲಭ್ಯವಿಲ್ಲದ ಕಾರಣ ರೈತರು ಮುಂಗಾರು ಮಳೆಯನ್ನೇ ಅವಲಂಬಿಸಿದ್ದಾರೆ.
ಉತ್ತಮ ಮಳೆಯಾದರೆ ಬೆಳೆ ಉತ್ಪಾದನೆ ಹೆಚ್ಚಾಗುತ್ತದೆ, ರೈತರ ಆದಾಯ ವೃದ್ಧಿಯಾಗುತ್ತದೆ, ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿ ಇರುತ್ತದೆ ಹಾಗೂ ದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಹೀಗಾಗಿ ಮುಂಗಾರು ಭಾರತದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿ ಎಂದು ಹೇಳಬಹುದು.
