ಅದು ಭಾರತದ ಅತ್ಯಂತ ಪುರಾತನ ಪವಿತ್ರ ಕ್ಷೇತ್ರ. ಪರಶಿವನಿಗಾಗಿಯೇ ಸಮರ್ಪಿತವಾಗಿರುವ ದೇಗುಲ. ಪಶ್ಚಿಮ ಘಟ್ಟಗಳ ಕಾನನದ ನಿರಮ್ಮಳವಾಗಿ ಹರಿಯುವ ನದಿ, ಹಸಿರ ಸಿರಿಯಲ್ಲಿದೆ ಭೂಲೋಕದ ಕೈಲಾಸ. ಅದು ಪವರ್ ಫುಲ್ ದೇಗುಲ ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು. ಅಸಲಿಗೆ ಈ ದೇವಾಲಯ ಭವ್ಯವಾಗಿಲ್ಲ. ದೇವಾಲಯಕ್ಕೆ ಕಲ್ಲು ಇಟ್ಟಿಗೆಗಳ ಕೋಟೆ ಕಟ್ಟಿಲ್ಲ, ಅದ್ಭುತ ವಾಸ್ತುಶಿಲ್ಪದ ಸೊಬಗು, ದೇವರಿಗೆ ವಜ್ರ ವೈಢೂರ್ಯದ ಅಲಂಕಾರ ಯಾವುದು ಇಲ್ಲ. ಪುಟ್ಟ ಕೊಳ, ನದಿಯ ತಟ, ಅದರ ನಡುವೆ ಒಣಹುಲ್ಲಿನ ಗುಡಿಸಲು. ಆದರೆ ಅತ್ಯಂತ ಪವರ್ ಫುಲ್ ದೇವಾಲಯ. ಇಲ್ಲಿ ಇಷ್ಟಾರ್ಥ ನೇರವೇರುತ್ತೆ, ಕಷ್ಟ ಕಳೆಯುತ್ತೆ, ನೋವಿನ ಮನಸಿಗೊಂದು ಶಕ್ತಿಯ ತುಂಬುವ ವಿಶಿಷ್ಟ ಸ್ಥಳದ ಶಿವನ ಅಲಯ. ಇದೇ ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು.
ಕೇರಳದ (Kerala) ಕೊಟ್ಟಿಯೂರು (Kottiyoor) ಅಂದರೆ ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಹರಿಯುವ ನದಿ, ಹಸಿರನ್ನೇ ಹೊದ್ದು ನಳನಳಿಸುತ್ತಿರುವ ಪಶ್ಚಿಮಘಟ್ಟದ ಮಧ್ಯೆ ಗುಡಿಸಲಿನೊಳಗೆ ಇರುವ ಶಿವನ ಆಲಯ. ವಿಶಿಷ್ಟ ಆಚರಣೆ, ಸ್ಥಳ ಐತಿಹ್ಯದಿಂದ ಭಕ್ತರ ಪಾಲಿನ ಶ್ರದ್ಧಾ ಕೇಂದ್ರವಾಗಿದೆ. ಅದರಲ್ಲೂ ಇತ್ತೀಚೆಗೆ ನಟ ದರ್ಶನ್, ರಿಷಬ್ ಶೆಟ್ಟಿ ಭೇಟಿ ನಂತರ ಈ ದೇಗುಲ ಕನ್ನಡಿಗರ ಪಾಲಿಗೆ ಇನ್ನಷ್ಟು ಹೆಚ್ಚು ಪರಿಚಿತವಾಗಿದೆ. ಅಂದ ಹಾಗೆ ಇದು ದಕ್ಷಿಣ ಕಾಶಿ ಅಂತಾನೇ ಖ್ಯಾತ. ಈ ಗುಡಿಸಲ ದೇಗುಲ, ಸುತ್ತಲು ಹರಿಯುವ ಕೊಳ, ಕಾಡಿನ ನಿಗೂಢತೆಯ ಹಾದಿಯ ಮಧ್ಯೆ ಆಧ್ಯಾತ್ಮಿಕ ಶಕ್ತಿಯ ಸಮ್ಮಿಲನ ಈ ಅಪರೂಪದ ದೇಗುಲ.
ಕೊಟ್ಟಿಯೂರು, ಇದು ಅಂತಿಂಥ ಜಾಗವಲ್ಲ. ಶಿವ ಪುರಾಣದಲ್ಲಿ ಉಲ್ಲೇಖವಾಗಿರುವ ಶಿವ ಸಾಕ್ಷಾತ್ಕಾರದ ಸನ್ನಿಧಾನವಿದು. ಶಿವಪುರಾಣದಲ್ಲಿಯೂ ಕೊಟ್ಟಿಯೂರಿನ ಉಲ್ಲೇಖವಾಗಿದೆ. ಶಿವನ ಮಾವನಾದ ಹಾಗೂ ಸತಿ ದೇವಿಯ ತಂದೆಯಾದ ದಕ್ಷ ಪ್ರಜಾಪತಿಯು ಲೋಕಕಲ್ಯಾಣಕ್ಕಾಗಿ ಯಾಗವನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಶಿವ ಹಾಗೂ ಸತಿ ದೇವಿಗೆ ಈ ಯಜ್ಞಕ್ಕೆ ಆಹ್ವಾನ ನೀಡಿರೋದಿಲ್ಲ. ಯಾಗಕ್ಕಾಗಿ ತನ್ನ ತವರಿನ ಕರೆ ಬಾರದೇ ಇರೋದಕ್ಕೆ ಸತಿ ದೇವಿಗೂ ಬೇಸರವಾಗುತ್ತದೆ. ಶಿವ ಬೇಡವೆಂದರೂ ತನ್ನ ತವರಿನ ಯಾಗಕ್ಕೆ ಆಹ್ವಾನ ಇರದೇ ಇದ್ದರೂ ಸತಿದೇವಿ ಹೊರಟುಬಿಡುತ್ತಾಳೆ. ಆದರೆ ಯಾಗದ ಸ್ಥಳದಲ್ಲಿ ತಂದೆಯ ಕಟುಮಾತು ಮತ್ತು ಶಿವ ದೇವರ ಬಗೆಗೆ ಅವಮಾನದ ಮಾತುಗಳನ್ನು ಕೇಳಿದ ಸತಿ ದೇವಿಗೆ ಅತೀವ ಕೋಪ, ನೋವು ಉಂಟಾಗುತ್ತದೆ. ಅದೇ ಯಜ್ಞಕುಂಡದಲ್ಲಿ ಪ್ರಾಣಬಿಡುತ್ತಾಳೆ. ಆ ಜಾಗವೇ ಕೊಟ್ಟಿಯೂರು.
ಸತಿಯ ದೇಹತ್ಯಾಗದ ಸುದ್ದಿಯಿಂದ ಶಿವದೇವ ಈ ಜಾಗಕ್ಕೆ ಬರುತ್ತಾನೆ. ಪತ್ನಿಯನ್ನು ಕಳೆದುಕೊಂಡ ಶಿವನ ಕೋಪಕ್ಕೆ ದುಃಖದ ತೀವ್ರತೆಗೆ ಇಡೀ ಜಗತ್ತು ಅಲ್ಲೋಲಕಲ್ಲೋಲವಾಗುತ್ತೆ. ಸಾಕ್ಷಾತ್ ವಿಷ್ಣುದೇವನೇ ಶಿವನ ಕೋಪವನ್ನು ಶಮನ ಮಾಡಲು ಮುಂದಾಗುತ್ತಾನೆ. ಕೊನೆಗೆ ಈ ಜಾಗಕ್ಕೆ ಬಂದು ದರ್ಶನ ಪಡೆದವರು ಯಾರೂ ತನ್ನಂತೆ ನೋವು ಅನುಭವಿಸಬಾರದು, ಅವರ ಇಷ್ಟಾರ್ಥ ನೇರವೇರಬೇಕು ಅಂತಾ ಶಿವನಿಂದ ವರ ಪಡೆದ ಅಪರೂಪದ ಜಾಗ ಅನ್ನುವ ಐತಿಹ್ಯವಿದೆ. ಹೀಗಾಗಿ ಭಕ್ತರು ತಮ್ಮ ಮನದ ಕ್ಲೇಷ ತೊಳೆದುಕೊಳ್ಳಬಹುದು ಅನ್ನುವ ನಂಬಿಕೆ, ಭಕ್ತಿಯಿಂದ ಈ ಜಾಗವನ್ನರಿಸಿ ಬರುತ್ತಾರೆ.

ಇಲ್ಲಿ ಪಾರ್ವತಿಯ ಮತ್ತೊಂದು ಅವತಾರ ಎಂದು ನಂಬಲಾಗುವ ಸತಿದೇವಿ, ದಾಕ್ಷಾಯಣಿದೇವಿ ಮತ್ತು ಬ್ರಹ್ಮ ಹಾಗೂ ವಿಷ್ಣುವನ್ನೂ ಆರಾಧಿಸಲಾಗುತ್ತದೆ. ಆದರೆ ಪ್ರಮುಖವಾಗಿ ಇಲ್ಲಿ ಶಿವನೇ ಆರಾಧ್ಯ ದೈವ. ಇಲ್ಲಿ ಪಶ್ಚಿಮ ತಟದಲ್ಲಿರುವ ದೇವಾಲಯವನ್ನು ‘ಇಕ್ಕರೆ ಕೊಟ್ಟಿಯೂರು ದೇವಾಲಯ’ ಎಂದು ಕರೆದರೆ, ಪೂರ್ವ ತಟದ ದೇವಾಲಯವನ್ನು ‘ಅಕ್ಕರೆ ಕೊಟ್ಟಿಯೂರು ದೇವಾಲಯ’ ಎಂದು ಕರೆಯಲಾಗುತ್ತದೆ. ಈ ಅಕ್ಕರೆ ಕೊಟ್ಟಿಯೂರಿನಲ್ಲಿಯೇ ವೈಶಾಖ ಉತ್ಸವ ನಡೆಯಲಿದ್ದು, ಕೇವಲ 28 ದಿನಗಳ ಕಾಲ ಮಾತ್ರ ಭಕ್ತರಿಗೆ ಇಲ್ಲಿಗೆ ಬರಲು ಅವಕಾಶ ಇರುತ್ತದೆ. ಉಳಿದ ದಿನದಲ್ಲಿ ಯಾರಿಗೂ ಪ್ರವೇಶವಿಲ್ಲ.
ಈ ದೇಗುಲ ಸೆಲಬ್ರೆಟಿಗಳ ಪಾಲಿಗೂ ಆಪತ್ಭಾಂಧವ ಆಗಿದೆ. ಸೋತಾಗಲೂ, ಗೆದ್ದಾಗಲು ಬಹುತೇಕ ಸೆಲಬ್ರೆಟಿಗಳು ನಡೆದುಬರೋದು ಈ ಕೊಟ್ಟಿಯೂರು ಶಿವನಂಗಳಕ್ಕೆ. ನಟ ದರ್ಶನ್ ಕೂಡ ಕಳೆದ ಬಾರಿ ಮಾನಸಿಕ ನೆಮ್ಮದಿ ಅರಸಿಕೊಂಡು ಶಿವನ ಆಲಯಕ್ಕೆ ಬಂದಿದ್ದರು. ಇಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇವರ ದರ್ಶನ ಪಡೆದಿದ್ದರು. ನಟ ರಿಷಬ್ ಕೂಡ ಇಲ್ಲಿ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಶಿರಭಾಗಿ ನಮಿಸಿದ್ದಾರೆ. ಜಗ್ಗೇಶ್ ಪಾಲಿಗೂ ಇದು ನೆಚ್ಚಿನ ಆಧ್ಯಾತ್ಮಿಕ ಕೇಂದ್ರ.
ದಿನದಿಂದ ದಿನಕ್ಕೆ ಕೊಟ್ಟಿಯೂರಿನ ಮಹಾತ್ಮೆ ಎಲ್ಲಾ ಕಡೆ ಪಸರಿಸುತ್ತಿದೆ. ಕರ್ನಾಟಕದಲ್ಲಿಯೂ ಕೊಟ್ಟಿಯೂರು ಈಗ ಮನೆಮಾತಾಗಿದೆ. ಹೀಗಾಗಿಯೇ ಈ ವರ್ಷ ಅನೇಕ ಕನ್ನಡಿಗರು ಈ ದೇಗುಲದ ಶಕ್ತಿ ಬಗ್ಗೆ ತಿಳಿದುಕೊಂಡು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಕರ್ನಾಟಕದ ಭಕ್ತರ ದಂಡು ಹರಿದುಬರುವ ಸೂಚನೆಯೂ ಇಲ್ಲದೇ ದೇಗುಲ ಆಡಳಿತ ಮಂಡಳಿ ಜನಸಂದಣಿ ಕಂಟ್ರೋಲ್ ಮಾಡದೇ ಸೋತು ಹೋಗಿದ್ದು, ಗಲಾಟೆ ಗದ್ದಲ ನೂಕುನುಗ್ಗಲು ಸೃಷ್ಟಿಯಾಗಿದೆ.
ಈ ಕೊಟ್ಟಿಯೂರು ಶಿವನ ಸನ್ನಿಧಾನಕ್ಕೆ ಹೋಗುವ ಹಾದಿಯೇ ಥೇಟು ಸ್ವರ್ಗದಂತೆ ಸೊಬಗು. ಭಕ್ತರ ಕಾಲಿಗೆ ಮುತ್ತಿಕ್ಕಿ ಹರಿಯುವ ತಣ್ಣಗಿನ ನೀರು, ಇದ್ರಲ್ಲಿ ಹೆಜ್ಜೆ ಹಾಕುತ್ತ ಶಿವಾಲಯವನ್ನು ಪ್ರವೇಶಿಸುವ ಸಂಭ್ರಮ, ಕಾಡಿನ ಹಾದಿ, ಪ್ರಕೃತಿ ಮತ್ತು ಶಿವ ಸನ್ನಿಧಾನ ಮಾನಸಿಕ ಕಿರಿಕಿರಿ ದೂರಗೊಳಿಸಿ ಚಂದದೊಂದು ಆಹ್ಲಾದಕಾರ ನೆಮ್ಮದಿಯನ್ನು ಮನಸಿಗೆ ನೀಡುತ್ತದೆ.
ಈ ಅಪರೂಪದ ಜಾಗ ಕೇವಲ ಭಾರತೀಯರ ಆಕರ್ಷಣೆ ಮಾತ್ರವಲ್ಲ, ವಿದೇಶಿಗರು ಕಣ್ಣರಳಿಸಿ ನೋಡುವ ಜಾಗ. ಈ ಅಪರೂಪದ ಗುಡಿಸಲಿನ ಆಲಯ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಥೇಟ್ ಪುರಾಣ ಕಾಲದ ಯಾಗಶಾಲೆಯನ್ನು ಹೋಲುವ ಈ ಸ್ಥಳ ಐತಿಹ್ಯ ಎಲ್ಲರ ಗಮನಸೆಳೆದಿದೆ. ಇಲ್ಲಿ ಬಂದು ಶಿವದರ್ಶನ ಪಡೆದರೆ ಜೀವನದಲ್ಲಿ ಏಳಿಗೆಯನ್ನು, ಅಭಿವೃದ್ಧಿಯನ್ನು ಹೊಂದಬಹುದು ಎಂಬ ನಂಬಿಕೆ ಇದೆ. ಕಷ್ಟ ದೂರವಾಗಿ ಶಿವಕೃಪೆಗೆ ಪಾತ್ರರಾಗಬಹುದು ಅನ್ನೋ ನಂಬಿಕೆ ಇದೆ. ಶಿವ ಮತ್ತು ಪಾರ್ವತಿಯ ಸ್ವರೂಪ, ಶಕ್ತಿಯ, ಸಮ್ಮಿಲನದ ಆಧ್ಯಾತ್ಮಿಕ ಶಕ್ತಿ ಶ್ರದ್ಧಾ ಕೇಂದ್ರ ಈ ಕೊಟ್ಟಿಯೂರು ಕ್ಷೇತ್ರ.
