DistrictsKarnatakaLatestMain PostShivamogga

ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ಧ: ಸಿಎಂ

ಶಿವಮೊಗ್ಗ: ಸರ್ಕಾರ ಮತ್ತು ಜನ ಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.

ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲೇ ನಮ್ಮ ರಾಜ್ಯ ಸರ್ಕಾರಿ ನೌಕರರು ದಕ್ಷ ಅಧಿಕಾರಿಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಹಲವಾರು ದಶಕಗಳಿಂದ ಸೇವೆ ಸಲ್ಲಿಸಿದ ಹಿರಿಯ ಸರ್ಕಾರಿ ಅಧಿಕಾರಿ ಅಥವಾ ನೌಕರರ ಶ್ರಮವೇ ಕಾರಣವಾಗಿದೆ. ಅವರನ್ನು ಈ ಸಮಯದಲ್ಲಿ ಸ್ಮರಿಸುತ್ತಾ ಅಭಿನಂದಿಸುತ್ತೇನೆ. ಈ ಪರಂಪರೆ ಹೀಗೆ ಮುಂದುವರೆಸುವ ಕರ್ತವ್ಯ ಮತ್ತು ನೈತಿಕ ಜವಾಬ್ದಾರಿ ನಿಮ್ಮ ಮೇಲಿದೆ. ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಂಡಲ್ಲಿ ನಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಬಹುದಾದ್ದರಿಂದ ಆಡಳಿತ ಯಂತ್ರದ ಬಗ್ಗೆ ಸ್ಪಷ್ಟತೆ ಇರಬೇಕು ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

ಆಳುವುದೇ ಬೇರೆ ಮತ್ತು ಆಡಳಿತ ಮಾಡುವುದೇ ಬೇರೆ. ಆದ್ದರಿಂದ ನಾವು ಈ ಎರಡರ ನಡುವಿನ ವ್ಯತ್ಯಾಸ ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸಿದಲ್ಲಿ ನಾವು ಇಡೀ ರಾಜ್ಯದ ಜನತೆಗೆ ಅಭಿವೃದ್ದಿಯ ಫಲ ನೀಡಲು ಸಾಧ್ಯ. ಜವಾನನಿಂದ ಹಿಡಿದು ಅಧಿಕಾರಿಯವರೆಗೆ ತಮ್ಮ ಅಧಿಕಾರವನ್ನು ಜನಪರವಾಗಿ ಬಳಸಬೇಕು ಎಂದರು.

ಕಾನೂನು ಬದ್ಧವಾಗಿ ಕೆಲಸ ಮಾಡಬೇಕು. ವಿವೇಚನೆ ಬಳಸುವ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಪರವಾಗಿ ಚಿಂತಿಸಿ ನಿರ್ಣಯ ಕೈಗೊಳ್ಳಬೇಕು. ಶ್ರೀಮಂತನ ಪರವಾಗಿ ಅಲ್ಲ. ಬಡವರು, ಜನ ಸಾಮಾನ್ಯರ ಪರವಾದ ನಿರ್ಣಯ ಕೈಗೊಳ್ಳಬೇಕು ಎಂದರು.

ಆಡಳಿತ ಸುಧಾರಣೆ 2ನೇ ಆಯೋಗದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು ಸರ್ಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಸರ್ಕಾರಿ, ಖಾಸಗಿ ಎಲ್ಲರ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕಿದೆ. ಈಗ ನಮ್ಮ ಚಿಂತನೆ, ಕಾರ್ಯವೈಖರಿಗಳು ಬದಲಾಗಬೇಕು ಎಂದು ಸಂದೇಶ ಕೊಟ್ಟರು.

ಗ್ರಾ.ಪಂಯಿಂದ ಹಿಡಿದು ವಿಧಾನಸೌಧದವರೆಗೆ ಈ ತಂತ್ರಜ್ಞಾನ ಬಳಕೆಯ ವ್ಯವಸ್ಥೆ ಬಂದಿದೆ. ನೀವು ನಿಗದಿತ ಅವಧಿಯಲ್ಲಿ ಕೈಗೊಳ್ಳುವ ನಿರ್ಧಾರ ನಿಮ್ಮ ಜನಪರ ಕಳಕಳಿಯನ್ನು ತೋರುತ್ತದೆ. ಜನರ ಓಡಾಟ ತಪ್ಪಿಸುತ್ತದೆ. ಭ್ರಷ್ಟರನ್ನಾಗಿಸುವುದನ್ನು ತಪ್ಪಿಸುತ್ತದೆ. ಆರೋಪವನ್ನು ತಪ್ಪಿಸುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುತ್ತವೆ ಎಂದು ಎಚ್ಚರಿಕೆ ಕೊಟ್ಟರು.

ನಾವು ನಮ್ಮ ಸಾಮಾಜಿಕ, ಜನಪರ ಕೆಲಸ, ಕಾರ್ಯಕ್ಷಮತೆಯ ಮೂಲಕ ಉತ್ತರ ನೀಡಬೇಕು. ಅದನ್ನು ನಾನು ನಿಮ್ಮಿಂದ ಬಯಸುತ್ತಿದ್ದೇನೆ. ಬನ್ನಿ ಬದಲಾವಣೆ ಮಾಡೋಣ. ಆಡಳಿತ ಯಂತ್ರದಲ್ಲಿ ಬದಲಾವಣೆ ಮಾಡೋಣ. ಆಳುವ ರೀತಿಯನ್ನು ಬದಲಾಯಿಸೋಣ, ಜನಸಾಮಾನ್ಯರ ಬಳಿಗೆ ವ್ಯವಸ್ಥೆಯನ್ನು ಕೊಂಡೊಯ್ಯೋಣ. ಬಡವರು, ರೈತರು, ದೀನ-ದಲಿತರು ಸೇರಿದಂತೆ ಎಲ್ಲರ ಅಭಿವೃದ್ದಿಗಾಗಿ ಸ್ಥಿತಪ್ರಜ್ಞೆ ಮತ್ತು ಸಮಯಪ್ರಜ್ಞೆಯಿಂದ ಕೆಲಸ ಮಾಡೋಣವೆಂದು ಕರೆ ನೀಡಿದರು. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

ಪ್ರಸ್ತುತ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ, ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡು ಅಧಿಕಾರಿ/ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ನೌಕರರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಪರಿಶ್ರಮವೂ ಕಾರಣವಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಡಾ.ಅಶ್ವಥನಾರಾಯಣ, ಭೈರತಿ ಬಸವರಾಜ್ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಅಶೋಕ್‍ನಾಯ್ಕ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಜರಿದ್ದರು.

Leave a Reply

Your email address will not be published.

Back to top button