– ಪ್ರವೀಣ್ ರೆಡ್ಡಿ
ಕಲಬುರಗಿ (ಆಳಂದ): ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತನ್ನು ಕರ್ನಾಟಕದ ಗಡಿ ಗ್ರಾಮವೊಂದರ ಬಡ ಹೆಣ್ಣುಮಗಳು ಅಕ್ಷರಶಃ ಸಾಬೀತುಪಡಿಸಿದ್ದಾಳೆ. ಕಡು ಬಡತನ, ಅಲೆಮಾರಿ ಬದುಕು ಮತ್ತು ಹಸಿವಿನ ನಡುವೆಯೂ ಆಕೆ ಸಾಧಿಸಿದ ಶಿಖರ ಇಂದು ಇಡೀ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ, ಇತ್ತೀಚೆಗೆ ಪ್ರಕಟಗೊಂಡ SSLC ಫಲಿತಾಂಶದಲ್ಲಿ ಶೇ. 84.64 (529/625) ಅಂಕಗಳನ್ನು ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾಳೆ.
ಭಿಕ್ಷಾಟನೆ ನಡುವೆಯೂ ಜ್ಞಾನದ ಹಸಿವು:
ಮೂಲತಃ ಅಲೆಮಾರಿ ಸಮುದಾಯವಾದ ಗೊಲ್ಲರ ಜನಾಂಗಕ್ಕೆ ಸೇರಿದ ಸುಜಾತಾ ಅವರದ್ದು ಅನಕ್ಷರಸ್ಥ ಕುಟುಂಬ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಈಕೆಯದು. ಒಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದರೂ, ಮನಸ್ಸಿನಲ್ಲಿ ಮಾತ್ರ ಶಿಕ್ಷಣದ ಕನಸಿತ್ತು. ಅಲೆಮಾರಿ ಬದುಕಿನ ಕಷ್ಟಗಳ ನಡುವೆ, ಸರ್ಕಾರಿ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತ ಈ ಪ್ರತಿಭೆ, ಇಂದು ತಾನು ಪಡೆದ ಅಂಕಗಳ ಮೂಲಕ ಬಡತನಕ್ಕೆ ಉತ್ತರ ನೀಡಿದ್ದಾಳೆ.
ವಚನದ ಸಾಲುಗಳೇ ಸ್ಫೂರ್ತಿ:
‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ…’ ಎಂಬ ಬಸವಣ್ಣನವರ ವಚನದಂತೆ, ಆರ್ಥಿಕವಾಗಿ ಅಶಕ್ತಳಾದರೂ ಜ್ಞಾನದ ಸಂಪತ್ತನ್ನು ಗಳಿಸುವಲ್ಲಿ ಸುಜಾತಾ ಶ್ರೀಮಂತಳಾಗಿದ್ದಾಳೆ. ಇಂದಿನ ಆಧುನಿಕ ಯುಗದಲ್ಲಿ ಸಕಲ ಸೌಲಭ್ಯಗಳಿದ್ದೂ ಓದಲು ಹಿಂಜರಿಯುವ ವಿದ್ಯಾರ್ಥಿಗಳ ನಡುವೆ, ಹರಿದ ಬಟ್ಟೆ, ಹಸಿವಿನ ಹೊಟ್ಟೆಯೊಂದಿಗೆ ಸುಜಾತಾ ತೋರಿದ ಛಲ ಎಲ್ಲರಿಗೂ ಮಾದರಿಯಾಗಿದೆ.
ಶಿಕ್ಷಣಪ್ರೇಮಿಗಳ ಸತ್ಕಾರ:
ಸುಜಾತಾಳ ಈ ಸಾಹಸಗಾಥೆಯನ್ನು ಗುರುತಿಸಿದ ಸ್ಥಳೀಯ ಶಿಕ್ಷಣಪ್ರೇಮಿ ಬಳಗದವರು, ಆಕೆಯ ಮನೆಗೆ ತೆರಳಿ ಸತ್ಕರಿಸಿದ್ದಾರೆ. ‘ಈಕೆಯ ಭವಿಷ್ಯಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು’ ಎಂಬ ಆಶಯದೊಂದಿಗೆ ಆಕೆಯ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ. ಅಲೆಮಾರಿ ಜನಾಂಗದಲ್ಲಿ ಅರಳಿದ ಈ ಅಪರೂಪದ ಪ್ರತಿಭೆ, ಕೇವಲ ಅಂಕಗಳನ್ನು ಗಳಿಸಿಲ್ಲ. ಬದಲಿಗೆ ಸಾವಿರಾರು ಬಡ ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ದೀಪವಾಗಿದ್ದಾಳೆ.



