ಬೆಂಗಳೂರು: ಬಿಡದಿ ಟೌನ್‌ಶಿಪ್ ವಿವಾದಕ್ಕೆ (Bidadi Township Row) ಬಿಜೆಪಿ ಮುಖಂಡರೂ ಈಗ ಬೀದಿಗಿಳಿದು ರೈತರ ಪರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜೆಡಿಎಸ್ ನಡೆಸುತ್ತಿದ್ದ ಹೋರಾಟಕ್ಕೆ ಈಗ ಬಿಜೆಪಿಯೂ ಕೈಜೋಡಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದೆ.
ಬಿಡದಿ ಟೌನ್‌ಶಿಪ್ ನೆಪದಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ರಿಯಲ್ ಎಸ್ಟೇಟ್ ದಂಧೆ ಹಾಗೂ ಅನ್ನದಾತರ ಭೂಮಿ ಲೂಟಿಯ ವಿರುದ್ಧ ಇಂದು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶದ ಮೂಲಕ ಜನಾಕ್ರೋಶದ ರಣಕಹಳೆ ಮೊಳಗಿಸಲಾಯಿತು. ನಮ್ಮ ಅನ್ನದಾತ ರೈತರ ಅಹವಾಲುಗಳಿಗೆ ಧ್ವನಿಯಾಗಿ, ಸಂಕಷ್ಟದಲ್ಲಿರುವ ನಮ್ಮ ರೈತರ ಪರವಾಗಿ ಜನನಾಯಕ,… pic.twitter.com/Fnusu1RWmQ
— Vijayendra Yediyurappa (@BYVijayendra) July 17, 2026
ಅಲ್ಲದೇ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ʻಬಿಡದಿ ಟೌನ್‌ಶಿಪ್ ಮತ್ತು ಕನಕಪುರ ಸಮೀಪ ಎರಡನೇ ಏರ್‌ರ್‌ಪೋರ್ಟ್ʼಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಪಾದಯಾತ್ರೆ (BJP Padayatra) ಘೋಷಣೆ ಮಾಡಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನಕ್ಕೂ ಮುನ್ನವೇ ಬಿಜೆಪಿ ಪಾದಯಾತ್ರೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಚರ್ಚಿಸಿ ಬಿಡದಿ ಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಣೆ ಮಾಡಲಾಗಿದೆ.
ಈ ಸಂಬಂಧ ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮಾತನಾಡಿ, ಟೌನ್‌ಶಿಪ್, ಕನಕಪುರ ಏರ್‌ಪೋರ್ಟ್ ನಿರ್ಮಾಣ ವಿರೋಧಿಸಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಳ್ಳಲಿದೆ. ಪಾದಯಾತ್ರೆ ಯಾವಾಗ ಮಾಡಬೇಕು ಅಂತ ತೀರ್ಮಾನ ಮಾಡ್ತೇವೆ. ಏರ್ಪೋರ್ಟ್ ಬಗ್ಗೆ ಕೂಡ ಮಾತಾಡಿದ್ದೇನೆ. ವಿಮಾನ ನಿಲ್ದಾಣವನ್ನ ಕನಕಪುರಕ್ಕೆ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ. ತುಮಕೂರಿಗೆ ತೆಗೆದುಕೊಂಡು ಹೋಗೋದ್ರಿಂದ ಮಧ್ಯಕರ್ನಾಟಕ, ಉತ್ತರ ಕರ್ನಾಟಕಕ್ಕೂ ಅನುಕೂಲ ಆಗಲಿದೆ. ಇವೆಲ್ಲಾ ವಿಚಾರ ತೆಗೆದುಕೊಂಡು ಬಿಜೆಪಿ ಪಾದಯಾತ್ರೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಸಿಎಂ ಧೋರಣೆ ಗಮನಿಸಿದ್ರೆ ರೈತರ ಪರವಾಗಿ ನಿಲುವು ತೆಗೆದುಕೊಳ್ಳಲ್ಲ. ಬೆಳಗ್ಗೆ ಬಿಡದಿ ಭೂ ಸ್ವಾಧೀನ ಬಗ್ಗೆ ನೋಟಿಫಿಕೇಷನ್ ಹೊರಡಿಸ್ತಾರೆ. ಸಂಜೆ ಕಮಿಟಿ ಮಾಡ್ತೇನೆ ಅಂತಾರೆ. ರೀಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕನಕಪುರ ಏರ್‌ಪೋರ್ಟ್ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಆದ್ರೆ ಡಿಕೆ ಶಿವಕುಮಾರ್ ಎಷ್ಟು ಚಾಲಾಕಿ ಇದ್ದಾರೆ ನೋಡಿ. ಇವರ ಉದ್ದೇಶ ರಿಯಲ್ ಎಸ್ಟೇಟ್ ಎನ್ನೋದು ಬಿಟ್ಟರೆ ಬೇರೆ ಏನೂ ಇಲ್ಲ ಅನ್ನೋದು ಇದರಲ್ಲೇ ಗೊತ್ತಾಗುತ್ತೆ ಎಂದು ಕುಟುಕಿದ್ದಾರೆ.
ಈ ಹಿಂದೆ ತಮ್ಮದೇ ಸರ್ಕಾರ ಇತ್ತು, ಎಲೆಕ್ಟ್ರಾನಿಕ್ ಸಿಟಿಯನ್ನ, ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಮಾಡೋದು ಬಿಟ್ಟು ಬೆಂಗಳೂರು, ಮೈಸೂರು ಮಧ್ಯೆ ಮಾಡಿದ್ರೆ ಮಂಡ್ಯ ವರೆಗೂ ಅಭಿವೃದ್ಧಿ ಆಗ್ತಿತ್ತು. ಆದ್ರೆ ಗಡಿ ಭಾಗದಲ್ಲಿ ಮಾಡಿದ್ರಿಂದ ರಾಜ್ಯಕ್ಕೆ ಆ ಪ್ರಮಾಣದಲ್ಲಿ ಲಾಭ ಆಗ್ತಿಲ್ಲ. ನಾವು ತಮಿಳು, ಆಂಧ್ರ ವಿರೋಧ ಮಾಡ್ತಿದ್ದೇವೆಂದಲ್ಲ. ಬೆಂಗಳೂರು ಅಭಿವೃದ್ಧಿ ಆದ್ರೆ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗುತ್ತೆ ಎಂದು ಹೇಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ದೇವನಹಳ್ಳಿಗೆ ತೆಗೆದುಕೊಂಡು ಹೋದ್ರಿ. ಆವತ್ತು ತುಮಕೂರು ಭಾಗದಲ್ಲಿ ಮಾಡಿದ್ರೆ, ಮದ್ಯ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಅನುಕೂಲ ಆಗ್ತಿತ್ತು. ಕನಕಪುರದಲ್ಲಿ ತಮ್ಮ ಜಮೀನಿನ ಬೆಲೆ ಹೆಚ್ಚಾಗಬೇಕೆನ್ನುವ ಆಲೋಚನೆ ಬಿಡಿ, ರಾಜ್ಯಕ್ಕೆ ಅನುಕೂಲ ಆಗ್ಬೇಕು ಎನ್ನುವುದು ಇದ್ರೆ ತುಮಕೂರು ಭಾಗದಲ್ಲಿ ಏರ್‌ಪೋರ್ಟ್ ಮಾಡಿ. ಇದರಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಅನುಕೂಲ ಆಗಲಿದೆ. ಮತ್ತೆ ಇನ್ನೊಂದು ಬಿಡದಿ ಪ್ರಾಜೆಕ್ಟ್ ತರ ಆಗ್ಬಾರ್ದು ಎಂದು ಸಲಹೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಎಂದರೆ ರಿಯಲ್‌ಎಸ್ಟೇಟ್ ಏಜೆಂಟ್ ಎನ್ನುವ ಹಾಗಿದೆ. ಹೀಗಾಗಿ ತಾವು ನಿಮ್ಮ ನಿರ್ಧಾರ ಬದಲಿಸಿ, ರಾಜ್ಯದ ಎಲ್ಲಾ ಜಿಲ್ಲೆಯ ಅಭಿವೃದ್ಧಿಗೆ ಚಿಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.
