ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿ ವಿ. ಡಿ. ಸತೀಶನ್ (V. D. Satheesan) ಅವರ ನೇತೃತ್ವದ ಸಚಿವ ಸಂಪುಟವು ವಿವಾದಿತ ಸಿಲ್ವರ್‌ಲೈನ್ (ಕೆ-ರೈಲು – K-Rail) ಯೋಜನೆಯನ್ನು ಅಧಿಕೃತವಾಗಿ ರದ್ದುಗೊಳಿಸಲು ಐತಿಹಾಸಿಕ ನಿರ್ಧಾರ ಪ್ರಕಟಿಸಿದೆ. ಹಿಂದಿನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಸರ್ಕಾರ ಜಾರಿಗೆ ತಂದಿದ್ದ ಈ ಸೆಮಿ-ಹೈಸ್ಪೀಡ್ ರೈಲು ಯೋಜನೆಗೆ ಮುಖ್ಯಮಂತ್ರಿ ಸತೀಶನ್ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.
ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದ್ದಾರೆ. ಈ ರೈಲು ಯೋಜನೆ ಪರಿಸರದ ಮೇಲೆ ಭೀಕರ ಪರಿಣಾಮ ಬೀರಲಿದ್ದು, ಪ್ರವಾಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಕೇರಳಕ್ಕೆ ಇದು ಸೂಕ್ತವಲ್ಲ ಎಂದಿದ್ದಾರೆ.
ಸುಮಾರು 64 ಸಾವಿರ ಕೋಟಿ ರೂ. ಅಧಿಕ ವೆಚ್ಚದ ಈ ಯೋಜನೆಗೆ ಅಂತರರಾಷ್ಟ್ರೀಯ ಸಾಲಗಳನ್ನು ಅವಲಂಬಿಸಬೇಕಾಗಿದ್ದು, ಇದು ರಾಜ್ಯವನ್ನು ಭಾರಿ ಸಾಲದ ಸುಳಿಗೆ ತಳ್ಳುತ್ತದೆ ಎಂದು ತಿಳಿಸಿದ್ದಾರೆ.
ಯೋಜನೆಗಾಗಿ ಜಮೀನು ಗುರುತಿಸಿ ಹೊರಡಿಸಲಾಗಿದ್ದ ಎಲ್ಲಾ ಭೂಸ್ವಾಧೀನ ನಿಯಮಗಳು ಮತ್ತು ಪ್ರಾಥಮಿಕ ಆದೇಶಗಳನ್ನು ಸಂಪೂರ್ಣವಾಗಿ ಹಿಂಪಡೆಯಲು (Denotify) ಸಚಿವ ಸಂಪುಟ ನಿರ್ಧರಿಸಿದೆ. ಇದರಿಂದಾಗಿ ವರ್ಷಗಳಿಂದ ತಮ್ಮ ಭೂಮಿಯನ್ನು ಮಾರಾಟ ಮಾಡಲು ಅಥವಾ ಅಡವಿಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಸಾವಿರಾರು ಸಾಮಾನ್ಯ ಜನರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ.
ರೈಲು ಮಾರ್ಗ ಗುರುತಿಸಲು ಸಾರ್ವಜನಿಕರ ಖಾಸಗಿ ಆಸ್ತಿ ಮತ್ತು ವಸತಿ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ವಿವಾದಿತ ಹಳದಿ ಸರ್ವೇ ಕಲ್ಲುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.
ಕೆ-ರೈಲು ಯೋಜನೆ ವಿರೋಧಿಸಿ ರಾಜ್ಯಾದ್ಯಂತ ತೀವ್ರ ಹೋರಾಟ ಮತ್ತು ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರು ಹಾಗೂ ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ಕೋರ್ಟ್‌ಗೆ ಶಿಫಾರಸು ಮಾಡುವುದಾಗಿ ಸರ್ಕಾರ ಹೇಳಿದೆ. ಇದನ್ನೂ ಓದಿ: ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ
VIDEO | Thiruvananthapuram, Kerala: CM VD Satheesan says, “Land acquisition for Silverline project denotified; govt will recommend withdrawal of cases against protestors.”
(Full video available on PTI Videos – https://t.co/n147TvrpG7) pic.twitter.com/CGj7TasVa7
— Press Trust of India (@PTI_News) May 20, 2026
ಏನಿದು ಕೆ-ರೈಲು ಯೋಜನೆ?
ಕೇರಳ ಸಿಲ್ವರ್‌ಲೈನ್ ಯೋಜನೆ (SilverLine Project), ಸಾಮಾನ್ಯವಾಗಿ ಕೆ-ರೈಲು (K-Rail) ಎಂದು ಕರೆಯಲ್ಪಡುವ, ಕೇರಳದ ದಕ್ಷಿಣ ಮತ್ತು ಉತ್ತರ ತುದಿಗಳನ್ನು ಅತ್ಯಂತ ವೇಗವಾಗಿ ಜೋಡಿಸಲು ರೂಪಿಸಲಾಗಿದ್ದ ಒಂದು ಮಹತ್ವಾಕಾಂಕ್ಷೆಯ ಸೆಮಿ ಹೈ-ಸ್ಪೀಡ್ ರೈಲು ಯೋಜನೆಯಾಗಿತ್ತು.
ಕೇರಳದ ದಕ್ಷಿಣ ತುದಿಯ ತಿರುವನಂತಪುರಂನಿಂದ ಉತ್ತರ ತುದಿಯ ಕಾಸರಗೋಡು ನಡುವಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸುವುದು ಇದರ ಮುಖ್ಯ ಗುರಿಯಾಗಿತ್ತು. ಪ್ರಸ್ತುತ ರೈಲು ಅಥವಾ ರಸ್ತೆ ಮೂಲಕ ಈ ದೂರವನ್ನು ಕ್ರಮಿಸಲು 12 ರಿಂದ 14 ಗಂಟೆ ಬೇಕು. ಕೆ-ರೈಲು ಯೋಜನೆ ಪೂರ್ಣಗೊಂಡಿದ್ದರೆ ಕೇವಲ 4 ಗಂಟೆಗಳಲ್ಲಿ ತಲುಪಬಹುದಿತ್ತು.
ಸುಮಾರು 529.45 ಕಿಲೋಮೀಟರ್ ಉದ್ದದ ಹಳಿ ನಿರ್ಮಿಸಿ ಗಂಟೆಗೆ ಗರಿಷ್ಠ 200 ಕಿಲೋಮೀಟರ್ ವೇಗದಲ್ಲಿ ರೈಲು ಚಲಿಸುವಂತೆ ಯೋಜನೆ ವಿನ್ಯಾಸಗೊಳಿಸಲಾಗಿತ್ತು.
ಕೇರಳ ಸರ್ಕಾರ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ‘ಕೇರಳ ರೈಲ್ವೆ ಅಭಿವೃದ್ಧಿ ನಿಗಮ’ (K-RDCL ಅಥವಾ K-Rail) ಈ ಯೋಜನೆಯ ಜವಾಬ್ದಾರಿ ಹೊತ್ತಿತ್ತು. ಆದರೆ ಕೇಂದ್ರ ರೈಲ್ವೆ ಸಚಿವಾಲಯವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಈ ಯೋಜನೆಗೆ ಅಗತ್ಯ ಒಪ್ಪಿಗೆಗಳನ್ನು ನೀಡಿರಲಿಲ್ಲ.

