– ವಾಟಾಳ್ ಮಾತಿಗೆ ನಗುತ್ತಲೇ ಮುಂದೆ ಸಾಗಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇಷ್ಟು ದಿನ ನೀವು ಅಧಿಕಾರದಲ್ಲಿದ್ದದ್ದು ಖುಷಿ ತಂದಿದೆ, ಯಾವ ಕಾರಣಕ್ಕೂ ನೀವು ರಾಜೀನಾಮೆ ಕೊಡಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿ ವಿನಂತಿಸಿಕೊಂಡಿದ್ದಾರೆ.
ಸಿಎಂ ರಾಜೀನಾಮೆ ಸುದ್ದಿ ವೈರಲ್ ಬೆನ್ನಲ್ಲೇ, ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯಾಗಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿಯಾದ ಅವರು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ವಿನಂತಿಸಿದರು. ವಾಟಾಳ್ ಅವರ ಈ ಮನವಿಯನ್ನು ಕೇಳಿದ ಸಿಎಂ ಸಿದ್ದರಾಮಯ್ಯ ಅವರು ನಗುತ್ತಲೇ ಮುಂದೆ ಸಾಗಿದರು. ಇದನ್ನೂ ಓದಿ: ಪವರ್ ಶೇರಿಂಗ್ ಆ ರೀತಿ ಏನೂ ಇಲ್ಲ, ಸಿದ್ದರಾಮಯ್ಯರಿಗೆ ಅವರದ್ದೇ ವರ್ಚಸ್ಸಿದೆ: ಸುರ್ಜೇವಾಲ
ಕಳೆದ ಮೂರು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ ಚರ್ಚೆಯೂ ಜೋರಾಗಿದೆ. ಈ ಹೊತ್ತಿನಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿತ್ತು. ಇಬ್ಬರು ನಾಯಕರ ಜೊತೆಗೂ ಹೈಕಮಾಂಡ್ ಹಲವು ಸುತ್ತಿನ ಸಭೆಗಳನ್ನು ನಡೆಸಿತು. ನಂತರ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ರಾಜ್ಯಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದೇವೆಂದು ತಿಳಿಸಿದರು.
ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ನಾಯಕರು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಗುರುವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಎಂ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ಆದರೆ, ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ: ಸಿದ್ದರಾಮಯ್ಯ
ಇಂತಹ ರಾಜಕೀಯ ಬೆಳವಣಿಗೆಗಳ ನಡುವೆಯೇ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗುತ್ತದೆ ಎಂದು ಹೇಳಿದ್ದ ವಾಟಾಳ್, ಇದೀಗ ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
