ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹಾಗೂ ಕಾಂಗ್ರೆಸ್ (Congress) ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಪಾದಯಾತ್ರೆಯ ಮಾರ್ಗದಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ರಾಜ್ಯ ನಾಯಕರು ಬಿಡುಗಡೆ ಮಾಡಿದ್ದ ರೂಟ್ ಮ್ಯಾಪ್ ಅನ್ನು ಬದಿಗೊತ್ತಿ, ಶಾಸಕ ಜಿ. ಜನಾರ್ದನ ರೆಡ್ಡಿ(Janardhana Reddy) ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು(Sriramulu) ತಮ್ಮ ರಾಜಕೀಯ ಅಸ್ತಿತ್ವ ಮತ್ತು ಭವಿಷ್ಯದ ದೃಷ್ಟಿಯಿಂದ ಪಾದಯಾತ್ರೆಯ ಹೊಸ ರೂಟ್ ಪ್ರಕಟಿಸಿದ್ದಾರೆ ಎಂಬ ಚರ್ಚೆ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ. ಇದನ್ನೂ ಓದಿ: ನಾಗೇಂದ್ರ ವಿರುದ್ಧ ಬಿಜೆಪಿಯಿಂದ ಬಳ್ಳಾರಿ ಚಲೋ – 10 ದಿನ 170 ಕಿ.ಮೀ ಪಾದಯಾತ್ರೆ ಘೋಷಣೆ
ಬಿಜೆಪಿ ಸಿದ್ಧಪಡಿಸಿದ್ದ ಮೊದಲ ಯೋಜನೆಯ ಪ್ರಕಾರ, ಪಾದಯಾತ್ರೆಯು ರಾಯಚೂರಿನ ಗುರುಗುಂಟಾದಿಂದ ಆರಂಭವಾಗಿ ಸಿಂಧನೂರು ಹಾಗೂ ಸಿರುಗುಪ್ಪ ಮಾರ್ಗವಾಗಿ ಬಳ್ಳಾರಿ ನಗರವನ್ನು ಪ್ರವೇಶಿಸಬೇಕಿತ್ತು. ಆದರೆ ಈಗ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಿರುಗುಪ್ಪ ಬದಲಾಗಿ ಕಾರಟಗಿ, ಗಂಗಾವತಿ, ಕಂಪ್ಲಿ ಮತ್ತು ಸಂಡೂರು ಮಾರ್ಗವಾಗಿ ಬಳ್ಳಾರಿಯನ್ನು ಪ್ರವೇಶಿಸಲಾಗುವುದು ಎಂದು ಸ್ವತಃ ಶಾಸಕ ಜನಾರ್ದನ ರೆಡ್ಡಿ ಬಹಿರಂಗಪಡಿಸಿದ್ದಾರೆ.
ರಾಜಕೀಯ ಲೆಕ್ಕಾಚಾರ ಏನು?
ಪಾದಯಾತ್ರೆ ಸಾಗಲಿರುವ ಗಂಗಾವತಿಯು ಜನಾರ್ದನ ರೆಡ್ಡಿ ಅವರ ಹಾಲಿ ವಿಧಾನಸಭಾ ಕ್ಷೇತ್ರವಾಗಿದ್ದರೆ, ಕಂಪ್ಲಿ ಕ್ಷೇತ್ರವನ್ನು ಬಿ. ಶ್ರೀರಾಮುಲು ತಮ್ಮ ಮುಂದಿನ ರಾಜಕೀಯ ಭದ್ರಕೋಟೆಯನ್ನಾಗಿ ಮಾಡಿಕೊಳ್ಳಲು ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಹಗರಣ, ಭ್ರಷ್ಟಾಚಾರ, ರಾಜಕೀಯ ಹಿನ್ನಡೆ – ಬಳ್ಳಾರಿ ಉಸ್ತುವಾರಿ ಸಚಿವರಾದರೆ ಸಂಕಷ್ಟ ಗ್ಯಾರಂಟಿನಾ?

