– ಸೆ. 1 ರಿಂದ 10 ರವರೆಗೆ ಕಾಲ್ನಡಿಗೆ
– ಗುರಗುಂಟದಿಂದ ಆರಂಭ, ಬಳ್ಳಾರಿಯಲ್ಲಿ ಸಮಾರೋಪ ಕಾರ್ಯಕ್ರಮ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ (B Nagendra) ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆ.1 ರಿಂದ 10 ದಿನಗಳ ಕಾಲ ಬಳ್ಳಾರಿ ಚಲೋ ಪಾದಯಾತ್ರೆ (Ballari Chalo Padayatra) ಘೋಷಣೆ ಮಾಡಿದೆ.
ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸಿ. ಟಿ. ರವಿ ಹಾಗೂ ರಾಜುಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರ ಪ್ರಕಟಿಸಲಾಯಿತು.
ಸೆಪ್ಟೆಂಬರ್ 1 ರಿಂದ 10 ರವರೆಗೆ ಒಟ್ಟು 10 ದಿನಗಳ ಕಾಲ ರಾಯಚೂರಿನಿಂದ ಬಳ್ಳಾರಿಯವರೆಗೆ ಸುಮಾರು 170 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಲಿಂಗಸುಗೂರು ಕ್ಷೇತ್ರದ ಗುರಗುಂಟದಿಂದ ಆರಂಭವಾಗುವ ಯಾತ್ರೆಯು ಲಿಂಗಸುಗೂರು (21 ಕಿ.ಮೀ), ಮಸ್ಕಿ (30 ಕಿ.ಮೀ), ಸಿಂಧನೂರು (30 ಕಿ.ಮೀ), ಶಿರಗುಪ್ಪ (31 ಕಿ.ಮೀ), ತೆಕ್ಕಲಕೋಟೆ (11 ಕಿ.ಮೀ), ಸಿಂದಗೇರಿ (20 ಕಿ.ಮೀ) ಮಾರ್ಗವಾಗಿ ಬಳ್ಳಾರಿಯನ್ನು (27 ಕಿ.ಮೀ) ತಲುಪಲಿದೆ.
ಪಾದಯಾತ್ರೆಗೆ ಜೆಡಿಎಸ್ ಸಂಪೂರ್ಣ ಬೆಂಬಲ ಸೂಚಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾವೇಶದಲ್ಲಿ ಕೇಂದ್ರದ ಪ್ರಮುಖ ಸಚಿವರು ಪಾಲ್ಗೊಳ್ಳಲಿದ್ದಾರೆ.
ವಿಜಯೇಂದ್ರ ಮಾತನಾಡಿ, ವಾಲ್ಮೀಕಿ ನಿಗಮದ ಅಕ್ರಮವನ್ನು ಸಿದ್ದರಾಮಯ್ಯ ಹಾಗೂ ಸಚಿವ ಶಿವಲಿಂಗೇಗೌಡ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇಷ್ಟಾದರೂ ಮುಖ್ಯ ಆರೋಪಿಯಾಗಿರುವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯದೇ ಸರ್ಕಾರ ರಕ್ಷಣೆ ಮಾಡುತ್ತಿದೆ. ಅಧಿವೇಶನದಲ್ಲಿ ಸತ್ಯ ಎದುರಿಸಲಾಗದೆ ಸರ್ಕಾರ ಕಲಾಪವನ್ನು ಮೊಟಕುಗೊಳಿಸಿ ಪಲಾಯನ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹೊಸ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ: ನಿತಿನ್ ಗಡ್ಕರಿ
ಬಡವರ ಕಲ್ಯಾಣ ಮತ್ತು ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಆದ್ಯತೆಯಾಗಿಲ್ಲ. ಬದಲಿಗೆ ಪಾರ್ಕ್‌ಗಳ ಜಮೀನು ನುಂಗುವುದು, ಬಿಡದಿ ಟೌನ್‌ಶಿಪ್, ಕನಕಪುರ ಏರ್‌ಪೋರ್ಟ್ ಮತ್ತು ನೈಸ್ ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳುವ ರಿಯಲ್ ಎಸ್ಟೇಟ್ ಯೋಜನೆಗಳಲ್ಲೇ ಆಡಳಿತ ಮುಳುಗಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ನೀಡಿದ್ದ ಶೇ.7ರ ಮೀಸಲಾತಿಯನ್ನು ಪ್ರಸ್ತುತ ಸರ್ಕಾರ ಶೇ.3ಕ್ಕೆ ಇಳಿಸಿ ಅನ್ಯಾಯ ಮಾಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣನೆ ಸೇರಿದಂತೆ ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಜನರ ಮುಂದಿಟ್ಟು ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
