ನಾಗ್ಪುರ: ನಾನು ಮೊದಲಿನಂತೆ ಇನ್ನು ಮುಂದೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ವಹಿಸುವ ಸಮಯ ಬಂದಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿದ್ದಾರೆ.
ಕೇಂದ್ರ ಸಂಪುಟ ಪುನಾರಚನೆಯಾಗಲಿದೆ(Cabinet Reshuffle) ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಗಡ್ಕರಿ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಕೆಲಸಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆ ಇತ್ತೀಚೆಗೆ ಕಡಿಮೆಯಾಗಿದೆ ಎಂದು ತಿಳಿಸಿದರು.
ಕೆಲಸವನ್ನು ಹೊಸ ಪೀಳಿಗೆಗೆ ವಹಿಸಿಕೊಡಬೇಕು. ಹೊಸ ತಲೆಮಾರು ಬಂದಿದೆ. ಅವರಿಗೆ ಹಳೆಯ ತಲೆಮಾರು ಮಾರ್ಗದರ್ಶನ ನೀಡುತ್ತಿದೆ. ಕಳೆದ 30 ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ, ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದೇನೆ. ಆದರೆ ಈಗ ಮೊದಲಿನಷ್ಟು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ, ಹೀಗಾಗಿ ಹೊಸ ಪೀಳಿಗೆಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಮುಂಬರುವ ದಿನಗಳಲ್ಲಿ ಕೆಲಸದ ವ್ಯಾಪ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದ ಗಡ್ಕರಿ, ಮಹಾರಾಷ್ಟ್ರದ ಯಾವುದೇ ಬುಡಕಟ್ಟು ಹಳ್ಳಿಯೂ ವಿದ್ಯುತ್ ರಹಿತವಾಗಿ ಉಳಿಯಬಾರದು ಮತ್ತು ರಾಜ್ಯಾದ್ಯಂತ ಅಭಿವೃದ್ಧಿ ಎದ್ದು ಕಾಣುವಂತೆ ಮಾಡುವುದು ನಮ್ಮ ಮುಖ್ಯ ಗುರಿ ಎಂದು ಹೇಳಿದರು. ಇದನ್ನೂ ಓದಿ: ಪೆಟ್ರೋಲ್ ವಾಹನಗಳಿಗೆ ಟಕ್ಕರ್ – ಪರ್ಯಾಯ ಇಂಧನ ವಾಹನಗಳ ಮಾರಾಟ ಭಾರೀ ಏರಿಕೆ
ಪಕ್ಷದ ನೂತನ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಕಟವಾದ 65 ಸದಸ್ಯರ ರಾಷ್ಟ್ರೀಯ ತಂಡದಲ್ಲಿ 51 ಹೊಸ ಮುಖಗಳಿಗೆ ಸ್ಥಾನ ನೀಡಲಾಗಿದ್ದು, ಇದು ಬಿಜೆಪಿಯಲ್ಲಿ ನಡೆಯುತ್ತಿರುವ ತಲೆಮಾರು ಬದಲಾವಣೆಯ (Generational Shift) ಸ್ಪಷ್ಟ ಸಂಕೇತವಾಗಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಮತ್ತು ಮಾಜಿ ಆರ್‌ಎಸ್‌ಎಸ್ ಮುಖಂಡ ರಾಮ್ ಮಾಧವ್ ಸೇರಿದಂತೆ 13 ರಾಷ್ಟ್ರೀಯ ಉಪಾಧ್ಯಕ್ಷರನ್ನು ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಈ ಸಂಘಟನಾ ಪುನಾರಚನೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲೂ ಬದಲಾವಣೆಗಳು ನಡೆಯಲಿವೆ ಎಂಬ ವದಂತಿಗಳು ಹರಿದಾಡುತ್ತಿದೆ.
