– ಪೂರ್ತಿ ಹಾಡದಿದ್ದಕ್ಕೆ ಶೆಟ್ಟರ್, ಬೊಮ್ಮಾಯಿ ಗರಂ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವಂದೇ ಮಾತರಂ (Vande Mataram) ಪೂರ್ಣ ಗೀತೆ ವಿವಾದ ತಾರಕಕ್ಕೇರಿದೆ. ಇತ್ತೀಚೆಗೆ ಗಂಗಾವತಿಯ ʻಪ್ರಜಾ ಸೇವೆʼ ಕಾರ್ಯಕ್ರಮದಲ್ಲಿ ಶಾಸಕ ಜನಾರ್ದನ ರೆಡ್ಡಿ ಒತ್ತಡಕ್ಕೆ ಪೂರ್ಣ ಗೀತೆ ಹಾಡಲಾಗಿತ್ತು. ಇದೀಗ ಪೂರ್ಣ ವಂದೇಮಾತರಂ ಹಾಡಿದವರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ (Karnataka Govt) ಮುಂದಾಗಿದೆ.
ಯಾರು ಎರಡು ಚರಣಕ್ಕಿಂತ ಹೆಚ್ಚಿಗೆ ಹಾಡಿದ್ದಾರೋ ಅಂತಹವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಹೇಳಿದಂತೆ ಕೇಳಲು ಆಗಲ್ಲ. ಸರ್ಕಾರದ ಆದೇಶ ಏನಿದೆ ಅದನ್ನ ಪಾಲಿಸಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅತ್ತ, ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವಿಕಲಚೇತನ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ವಂದೇ ಮಾತರಂ ಅರ್ಧ ಗೀತೆ ಹಾಡಲಾಗಿದೆ. ಇದಕ್ಕೆ ಸಂಸದ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಪೂರ್ಣ ಗೀತೆ ಹಾಡಲು ಶೆಟ್ಟರ್ ಸೂಚಿಸುತ್ತಿದ್ದಂತೆ ಪೂರ್ಣ ಗೀತೆ ಹಾಡಲು ಸಿಬ್ಬಂದಿ ತಡಕಾಡಿದ್ದಾರೆ. ಬಳಿಕ ಪೂರ್ಣ ಗೀತೆ ಹುಡುಕಿ ಮೊಬೈಲ್‌ನಲ್ಲಿ ಪ್ಲೇ ಮಾಡಿದ್ದಾರೆ.
ಇನ್ನು, ಗದಗದಲ್ಲೂ ಸಂಸದ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ. ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪೂರ್ಣಪ್ರಮಾಣದಲ್ಲಿ ಹಾಡದವರ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ಕೊಡೋದಾಗಿ ಹೇಳಿದ್ದಾರೆ.

