ಹಾವೇರಿ: ಜಿಲ್ಲೆಯಲ್ಲಿ ಚಿರತೆ ಕಾಟಕ್ಕೆ ರೈತರು ಬೇಸತ್ತು, ಜಮೀನುಗಳಿಗೆ ತೆರಳಲು (Haveri) ಹಿಂದೇಟು ಹಾಕುವಂತಾಗಿದೆ. ರಾಣೆಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ರೈತರ ಜಮೀನುಗಳ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ರೈತರು, ಕುರಿಗಾಹಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಅರಣ್ಯ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಕುರಿಗಾಹಿಗಳು ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕುರಿ ಹಿಂಡಿನಲ್ಲಿದ್ದ ಮೂರ್ನಾಲ್ಕು ಮೇಕೆ ಮರಿಗಳನ್ನು ಚಿರತೆ ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ರೈತರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಏಕಾಏಕಿ ಎತ್ತುಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ರೈತರು ಜೋರಾಗಿ ಕಿರುಚಿಕೊಂಡಿದ್ದರಿಂದ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಘಟನೆಯಿಂದ ಆತಂಕಗೊಂಡ ರೈತರು ಎತ್ತುಗಳನ್ನು ಕರೆದುಕೊಂಡು ಮನೆಗೆ ವಾಪಸ್ ತೆರಳಿದ್ದಾರೆ.
ರೈತರ ಜಮೀನುಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಕೂಡ ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರು ಮತ್ತಷ್ಟು ಆತಂಕಗೊಂಡಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಚಿರತೆ ಹಿಡಿಯಲು ಬೋನುಗಳನ್ನು ಅಳವಡಿಸಿ, ಸೆರೆ ಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇದನ್ನೂ ಓದಿ: ಮತ್ತೆ 23 ತಾಲೂಕುಗಳು ಬರ ಪೀಡಿತ : ಸರ್ಕಾರ ಅಧಿಕೃತ ಘೋಷಣೆ
ಹಗಲು ವಿದ್ಯುತ್ ನೀಡುವಂತೆ ರೈತರ ಮನವಿ
ಇನ್ನು ಮುಂಗಾರು ಮಳೆಯೂ ಕೈಕೊಟ್ಟಿರುವುದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಜಮೀನುಗಳಿಗೆ ನೀರು ಹಾಯಿಸಬೇಕಾದ ಪರಿಸ್ಥಿತಿ ಇದೆ. ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಬರುತ್ತಿರುವುದರಿಂದ ಆ ಸಮಯದಲ್ಲಿ ಜಮೀನಿಗೆ ತೆರಳಬೇಕಾಗಿದೆ.
ಚಿರತೆ ಕಾಟದ ಹಿನ್ನೆಲೆಯಲ್ಲಿ ರಾತ್ರಿ ನೀಡುತ್ತಿರುವ ವಿದ್ಯುತ್ ಬದಲಿಗೆ ಹಗಲು ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.ಇದನ್ನೂ ಓದಿ: ನಾನು ನಾಲ್ಕು ಸೆಲ್ಗಳ ಗೃಹ ಸಚಿವನಲ್ಲ: ಹೆಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

