ನವದೆಹಲಿ/ಚೆನ್ನೈ: ತಮಿಳುನಾಡಿನಲ್ಲಿ (Tamilnadu) ಹಿಂದಿ ಕಲಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ರಾಜ್ಯ ಸರ್ಕಾರ ತನ್ನ ಮನೋಭಾವ ಬದಲಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ (Supreme Court) ಚಾಟಿ ಬೀಸಿದೆ.
ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎ.ಜಿ.ಮಸೀಹ್ ಅವರ ಪೀಠ ಬೇಸರ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ವಿರೋಧಿಸುತ್ತಿದೆ. ಈ ಶಾಲೆಗಳಲ್ಲಿ ಹಿಂದಿ (Hindi) ಸೇರಿದಂತೆ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಆದ್ರೆ, ಇದು ರಾಜ್ಯದ ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ ಎಂಬುದು ಸರ್ಕಾರದ ಪ್ರಮುಖ ಆಕ್ಷೇಪವಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ವಂದೇ ಮಾತರಂ ಗೀತೆ ವಿವಾದ – ಪೂರ್ತಿ ಹಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದು
ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕು. ತಮಿಳುನಾಡಿನ ನೆಲದಲ್ಲಿ ಹಿಂದಿ ಕಲಿಸಬಾರದು ಎಂದು ಹೇಳಲಾಗದು. ಅಲ್ಲದೆ, ಚೆನ್ನೈ ಮತ್ತು ದೆಹಲಿ ಪರಸ್ಪರ ದೂರವಾಗಬಾರದು. ಕೇಂದ್ರದಿಂದ ಬರುವ ಯೋಜನೆಯಿಂದ ರಾಜ್ಯದ ಶಿಕ್ಷಣದ ಗುಣಮಟ್ಟ ಕಡಿಮೆಯಾಗುವುದಿಲ್ಲ. ಹೆಚ್ಚುವರಿ ಅವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡು ಸರ್ಕಾರವು ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಪ್ರತಿ ಜಿಲ್ಲೆಯಲ್ಲಿ ಅಗತ್ಯವಿರುವ ಭೂಮಿಯನ್ನು ಗುರುತಿಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಆ ಮನವಿಯನ್ನು ತಿರಸ್ಕರಿಸಿ, ಆದೇಶ ಪಾಲನೆಗೆ ರಾಜ್ಯ ಸರ್ಕಾರಕ್ಕೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿದೆ.ಇದನ್ನೂ ಓದಿ: ಕಾಂಗ್ರೆಸ್‌ನ ಬಹಳ ಜನ ಬಿಜೆಪಿ-ಜೆಡಿಎಸ್ ಸೇರೋಕೆ ಸಂಪರ್ಕ ಮಾಡ್ತಿದ್ದಾರೆ: ಆರ್. ಅಶೋಕ್ ಬಾಂಬ್
ಈ ಮಧ್ಯೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ನವೋದಯ ಶಾಲೆಗಳ ಸ್ಥಾಪನೆ ಹಾಗೂ ನೀತಿ ಅನುಷ್ಠಾನದ ಕುರಿತು ಮತ್ತಷ್ಟು ಚರ್ಚೆ ನಡೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಲಾಗಿದೆ.
ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಜಯದೀಪ್ ಗುಪ್ತಾ, ನವೋದಯ ಶಾಲೆಗಳ ನೀತಿ ರಾಜ್ಯದ ಎರಡು ಭಾಷೆಗಳ ನೀತಿಗೆ ವಿರುದ್ಧವಾಗಿದೆ ಎಂದು ವಾದಿಸಿದರು. ಹಿಂದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ತಮಿಳು ಭಾಷೆಯ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಶಿಕ್ಷಣ ನೀತಿಯಲ್ಲಿ ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆ ಎರಡೂ ದಿಕ್ಕಿನಿಂದಲೂ ಇರಬೇಕು. ಕೇಂದ್ರದ ಯೋಜನೆಯ ವೆಚ್ಚದ ಹೊಣೆ ರಾಜ್ಯದ ಮೇಲೂ ಬೀಳಲಿದೆ. ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ರಾಜ್ಯ ಸರ್ಕಾರ ಭೂಮಿಯನ್ನು ಒದಗಿಸಬೇಕಷ್ಟೇ, ಉಳಿದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ ಎಂದು ತಿಳಿಸಿದರು.ಇದನ್ನೂ ಓದಿ: ಅನುಗ್ರಹ ಯೋಜನೆಯ 100 ಕೋಟಿ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ

