– ಮತ್ತೆ ಮತ್ತೆ ನಿಜವಾಗುತ್ತಿದೆ ವಿಚಿತ್ರ ಕಾಕತಾಳೀಯ!
ಬಳ್ಳಾರಿ: ಗಣಿನಾಡು ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿ(Ballari) ಜಿಲ್ಲೆಯ ರಾಜಕೀಯ ಯಾವಾಗಲೂ ಹೈವೋಲ್ಟೇಜ್. ಅಧಿಕಾರ, ಭ್ರಷ್ಟಾಚಾರ, ಗಣಿಗಾರಿಕೆ ಹಾಗೂ ಹಗರಣಗಳ ಕಾರಣಕ್ಕೆ ಸದಾ ರಾಜ್ಯಮಟ್ಟದಲ್ಲಿ ಮುಂಚೂಣಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರ ಹುದ್ದೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಎರಡು ದಶಕಗಳ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಬಳ್ಳಾರಿಯ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ(District In Charge Minister) ಬಹುತೇಕ ನಾಯಕರಿಗೆ ಒಂದಲ್ಲಾ ಒಂದು ರೂಪದಲ್ಲಿ ರಾಜಕೀಯ ಹಿನ್ನಡೆ, ಹಗರಣಗಳ ನಂಟು ಅಥವಾ ಅಧಿಕಾರ ನಷ್ಟದ ಸಂಕಷ್ಟ ಎದುರಾಗುತ್ತಲೇ ಬಂದಿದೆ. ಎಂ.ಪಿ. ಪ್ರಕಾಶ್ ಅವರಿಂದ ಆರಂಭವಾದ ಈ ರಾಜಕೀಯ ಗ್ರಹಚಾರದ ಸರಪಳಿ ಇಂದಿನ ಬಿ. ನಾಗೇಂದ್ರವರೆಗೂ ಮುಂದುವರಿದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಹಿನ್ನಡೆಯ ಹೆಜ್ಜೆಗುರುತುಗಳು:
ದಿ. ಎಂ.ಪಿ. ಪ್ರಕಾಶ್ (2006): 2006ರಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಹಿರಿಯ ಮುತ್ಸದ್ದಿ ಎಂ.ಪಿ. ಪ್ರಕಾಶ್ ಅವರು, ನಂತರ ನಡೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಅನಿರೀಕ್ಷಿತ ಸೋಲನುಭವಿಸಿದರು.
ಜಿ. ಜನಾರ್ದನ ರೆಡ್ಡಿ (2008): ಬಿಜೆಪಿ ಸರ್ಕಾರದಲ್ಲಿ ಗಣಿ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿ ಉಸ್ತುವಾರಿ ವಹಿಸಿಕೊಂಡಿದ್ದ ಜನಾರ್ದನ ರೆಡ್ಡಿಗೆ(Janardhana Reddy) ಅಕ್ರಮ ಗಣಿಗಾರಿಕೆ ಪ್ರಕರಣ ತೀವ್ರ ಮುಳುವಾಯಿತು. ಬಂಧನ, ಸುದೀರ್ಘ ಜೈಲುವಾಸದೊಂದಿಗೆ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಯಿತು.
ಪಿ.ಟಿ. ಪರಮೇಶ್ವರ್ ನಾಯ್ಕ್ (2013): ಸಿದ್ದರಾಮಯ್ಯ ಸಂಪುಟದಲ್ಲಿ ಉಸ್ತುವಾರಿಯಾಗಿದ್ದ ಪರಮೇಶ್ವರ್ ನಾಯ್ಕ್, ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ವಿವಾದದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.
ಸಂತೋಷ್ ಲಾಡ್ (2016): ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಹೊತ್ತ ಸಂತೋಷ್ ಲಾಡ್(Santosh Lad) ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಪರಾಭವಗೊಂಡರು. ಇದನ್ನೂ ಓದಿ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಜಗಳೂರಿನಿಂದ ಬಳ್ಳಾರಿಗೆ ಬಿಜೆಪಿ ಪಾದಯಾತ್ರೆ
ಆನಂದ್ ಸಿಂಗ್ (2019): ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಉಸ್ತುವಾರಿಯಾಗಿದ್ದ ಆನಂದ್ ಸಿಂಗ್, 2023ರ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು. ವಿಜಯನಗರ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಿದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.
ಬಿ. ಶ್ರೀರಾಮುಲು (2022): ಬಳ್ಳಾರಿ ಉಸ್ತುವಾರಿ ವಹಿಸಿಕೊಂಡ ಪ್ರಭಾವಿ ನಾಯಕ ಶ್ರೀರಾಮುಲು(B. Sriramulu) 2023ರ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಬಳಿಕ 2024ರ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸತತ ಸೋಲು ಕಂಡರು.
ಬಿ. ನಾಗೇಂದ್ರ (2023): ಕಾಂಗ್ರೆಸ್ ಸರ್ಕಾರದಲ್ಲಿ ಉಸ್ತುವಾರಿಯಾಗಿದ್ದ ಬಿ. ನಾಗೇಂದ್ರ (B Nagendra) ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲು ಪಾಲಾಗಬೇಕಾಯಿತು. ಇದೀಗ ಪುನಃ ನಾಗೇಂದ್ರ ಅವರನ್ನೇ ಸುತ್ತುವರಿದಿರುವ ವಾಲ್ಮೀಕಿ ಹಗರಣದ ಕಾವು ಸದನದಿಂದ ಬೀದಿ ಹೋರಾಟದವರೆಗೂ ತಲುಪಿದೆ. ಇದನ್ನೂ ಓದಿ: “ದಲಿತರ 187 ಕೋಟಿ ಹಣವನ್ನು ನುಂಗಿದ ನಾಗೇಂದ್ರ ರಾಜೀನಾಮೆ ನೀಡಲೇಬೇಕು” – ವಿಧಾನಸೌಧ ಮುತ್ತಿಗೆ, ಬಿಜೆಪಿ ನಾಯಕರು ವಶ
ಜಮೀರ್ ಅಹ್ಮದ್(2026): ನಾಗೇಂದ್ರ ರಾಜೀನಾಮೆ ಬಳಿಕ ಜಮೀರ್ ಅಹ್ಮದ್(Zameer Ahmed Khan) ಉಸ್ತುವಾರಿ ವಹಿಸಿಕೊಂಡರು. ದಾವಣಗೆರೆ ಉಪಚುನಾವಣೆಯಲ್ಲಿ ಜಮೀರ್ ಮೇಲೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಸಹ ಕೇಳಿ ಬಂದಿತ್ತು. ಎರಡನೇ ಬಾರಿ ಮಂತ್ರಿಸ್ಥಾನ ಪಡೆದ ಬಳಿಕ ಜಮೀರ್ ಅಹ್ಮದ್ ನನಗೆ ವಿಜಯನಗರ ಜಿಲ್ಲೆಯ ಉಸ್ತುವಾರಿ ಪಟ್ಟದಿಂದ ಕೈ ಬಿಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಪ್ರಭಾವಿ ರಾಜಕಾರಣಿಗಳು ತುದಿಗಾಲಿನಲ್ಲಿ ನಿಂತು ಪಡೆಯುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹುದ್ದೆ ನಿಜಕ್ಕೂ ರಾಜಕೀಯವಾಗಿ ಪವರ್‌ಫುಲ್ ಆದರೂ, ನಂತರ ಎದುರಾಗುವ ಸಂಕಷ್ಟಗಳು ಕೇವಲ ಕಾಕತಾಳೀಯವೇ ಅಥವಾ ಗಣಿ ಜಿಲ್ಲೆಯ ಹೈವೋಲ್ಟೇಜ್ ರಾಜಕೀಯದ ಪ್ರಭಾವವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
