ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(Valmiki Corporation Scam) ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್(High Court) ಬಿಗ್ ರಿಲೀಫ್ ಸಿಕ್ಕಿದೆ.
ನಾಗೇಂದ್ರ (B Nagendra) ಅವರ ಜಾಮೀನು ಆದೇಶದಲ್ಲಿದ್ದ ಪ್ರಮುಖ ಷರತ್ತೊಂದಕ್ಕೆ ನ್ಯಾಯಾಲಯವು ತಡೆ ನೀಡಿದ್ದು, ಪ್ರಯಾಣಕ್ಕೆ ಸಂಬಂಧಿಸಿದಂತೆ ಸಡಿಲಿಕೆ ನೀಡಿದೆ.
ವಿಶೇಷ ನ್ಯಾಯಾಲಯವು ಜಾಮೀನು ನೀಡುವಾಗ “ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯ ಬಿಟ್ಟು ತೆರಳಬಾರದು” ಎಂದು ವಿಧಿಸಿದ್ದ ಷರತ್ತಿಗೆ ಹೈಕೋರ್ಟ್ ತಡೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ ಕರ್ನಾಟಕ ರಾಜ್ಯದಿಂದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ ಎಂಬ ಸ್ಪಷ್ಟ ಷರತ್ತು ವಿಧಿಸಿತ್ತು. ಇದನ್ನೂ ಓದಿ: ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ – ಸಚಿವ ನಾಗೇಂದ್ರಗೆ ಸಂಕಷ್ಟ, ರದ್ದಾಗುತ್ತಾ ಜಾಮೀನು?
ಈಗ ಅನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತನ್ನು ಮಾರ್ಪಡಿಸಿ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ED) ಆಗಸ್ಟ್ 12 ರವರೆಗೆ ಕಾಲಾವಕಾಶ ನೀಡಲಾಗಿದೆ.
ಜುಲೈನಲ್ಲಿ ದೆಹಲಿಗೆ ತೆರಳಲು ಅನುಮತಿ ನೀಡುವಂತೆ ಕೋರಿ ನಾಗೇಂದ್ರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ನಾಗೇಂದ್ರ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಾನು ಸಚಿವನಾಗಿರುವ ಕಾರಣ ದೆಹಲಿ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಹೀಗಾಗಿ ಆದೇಶವನ್ನು ಮಾರ್ಪಾಡಿಸಬೇಕೆಂದು ಕೋರಿ ಮನವಿ ಸಲ್ಲಿಸಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ನೂರಾರು ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ವಿವಿಧ ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣ ಹೊರಬಿದ್ದ ಬೆನ್ನಲ್ಲೇ ಈ ಹಿಂದೆ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಹಾಗೂ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದರು.
ವಿಚಾರಣೆಯ ನಂತರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದರೂ, ರಾಜ್ಯದಿಂದ ಹೊರಗೆ ತೆರಳಲು ಕೋರ್ಟ್ ಅನುಮತಿ ಕಡ್ಡಾಯವಾಗಿತ್ತು. ಪ್ರಸ್ತುತ ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ನಾಗೇಂದ್ರ ಅವರಿಗೆ ರಾಜ್ಯದ ಹೊರಗೆ ಪ್ರಯಾಣಿಸಲು ಹಾದಿ ಸುಗಮವಾಗಿದೆ.

