ಬೆಂಗಳೂರು: ಕಳೆದ ವರ್ಷ ನಡೆದ ಪವಿತ್ರ ಮಹಾ ಕುಂಭಮೇಳದ(Kumbamela) ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ(Bhaktivedanta Swami Prabhupada) ನೀಡಿದ ವಿಶ್ವಗುರು(Vishwaguru) ಗೌರವದ ಸ್ಮರಣಾರ್ಥ ಇಸ್ಕಾನ್(ISKCON) ಬೆಂಗಳೂರು, ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಿರಂಜನಿ ಅಖಾಡ, ಹರಿದ್ವಾರದ ಆಚಾರ್ಯ ಮಹಾಮಂಡಲೇಶ್ವರರಾದ ಪರಮಪೂಜ್ಯ ಕೈಲಾಶಾನಂದ ಗಿರಿ(Kailashanand Giri) ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಭವ್ಯ ವಿಶ್ವಗುರು ಸಂಭ್ರಮೋತ್ಸವ ನಡೆಯಿತು. ಸನಾತನ ಧರ್ಮ ಮತ್ತು ಹಿಂದೂ ಶಾಸ್ತ್ರಗಳ ಪ್ರಸಾರದಲ್ಲಿ ತೊಡಗಿರುವ ಖ್ಯಾತ ವೈದಿಕ ವಿದ್ವಾಂಸ, ವಾಗ್ಮಿ, ಲೇಖಕ ಹಾಗೂ ನಿರ್ದೇಶಕರಾದ ದುಷ್ಯಂತ್ ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕೈಲಾಶಾನಂದ ಗಿರಿ ಮಹಾರಾಜರು ಮಾತನಾಡಿ, 2025ರಲ್ಲಿ ಪ್ರಯಾಗರಾಜ್ನ ಪವಿತ್ರ ಭೂಮಿಯಲ್ಲಿ ನಡೆದ ಮಹಾ ಕುಂಭಮೇಳದ ಶುಭ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ ‘ವಿಶ್ವಗುರು’ ಗೌರವವನ್ನು ನೀಡುವ ಅಪರೂಪದ ಅವಕಾಶ ಮತ್ತು ಭಾಗ್ಯವನ್ನು ಭಗವಾನ್ ಶ್ರೀಕೃಷ್ಣನೇ ನಮಗೆ ಕರುಣಿಸಿದನು ಎಂಬುದು ನಮ್ಮ ಮಹಾಭಾಗ್ಯ. ನಂತರ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಉಡುಪಿಯಲ್ಲಿ ಆ ಮಹತ್ವದ ಘಟನೆಯನ್ನು ಸ್ಮರಿಸಿಕೊಂಡೆವು. ಇಂದು ಶ್ರೀಲ ಪ್ರಭುಪಾದರ ಸ್ವಂತ ಮಂದಿರದಲ್ಲಿಯೇ ಆ ಐತಿಹಾಸಿಕ ಕ್ಷಣವನ್ನು ಮತ್ತೆ ಅನುಭವಿಸುತ್ತಿದ್ದೇವೆ ಎಂದರು.
ಹರೇ ಕೃಷ್ಣ ಗಿರಿಯಲ್ಲಿರುವ ಈ ಅದ್ಭುತ ಇಸ್ಕಾನ್ ಬೆಂಗಳೂರು ಮಂದಿರಕ್ಕೆ ಬಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಈ ಸಂಭ್ರಮವು ನಿರಂತರ ಮಹೋತ್ಸವವಾಗಿ ಬೆಳೆಯಬೇಕು ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಆಚರಿಸಲ್ಪಡಬೇಕು. ಶ್ರೀ ಮಧು ಪಂಡಿತ ದಾಸ ಮತ್ತು ಶ್ರೀ ಚಂಚಲಪತಿ ದಾಸರ ನೇತೃತ್ವದಲ್ಲಿ ಇಸ್ಕಾನ್ ಬೆಂಗಳೂರು ಮನುಕುಲದ ಹಿತಕ್ಕಾಗಿ ಅನೇಕ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ನಾನು ಪ್ರಶಂಸಿಸುತ್ತೇನೆ. ಶ್ರೀಲ ಪ್ರಭುಪಾದರ ಸಂದೇಶವನ್ನು ಜಗತ್ತಿನಾದ್ಯಂತ ಮುಂದುವರಿಸುತ್ತಿರುವ ಸಂಸ್ಥೆಯ ಸಮರ್ಪಿತ ಭಕ್ತರಿಗೆ ನನ್ನ ಶುಭಾಶಯಗಳು ಎಂದು ಹೇಳಿದರು. ಇದನ್ನೂ ಓದಿ: ವೀರಶೈವ-ಲಿಂಗಾಯತ ಭಕ್ತಾದಿಗಳಿಗೆ ತಂಗಲು ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮಂಜೂರು: ಡಿಕೆಶಿ ಘೋಷಣೆ

ಶ್ರೀ ದುಷ್ಯಂತ್ ಶ್ರೀಧರ್(Dushyanth Sridhar) ಮಾತನಾಡುತ್ತಾ, ಇಂದು ಇಸ್ಕಾನ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಭವ್ಯ ಸಂಭ್ರಮೋತ್ಸವದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ. ಈ ಮಂದಿರವನ್ನು ನಾನು ನನ್ನದೇ ಮಂದಿರವೆಂದು ಭಾವಿಸುತ್ತೇನೆ ಮತ್ತು ಇದು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ.ಸಮಾಜದ ಪ್ರತಿಯೊಬ್ಬ ಮಾನವನ ಹೃದಯದಲ್ಲಿ ಕೃಷ್ಣಭಕ್ತಿಯನ್ನು ನೆಟ್ಟ ಶ್ರೀಲ ಪ್ರಭುಪಾದರ ಸಾಧನೆ ಕಳೆದ ಶತಮಾನದ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ. ಆದ್ದರಿಂದ ಅವರಿಗೆ ‘ವಿಶ್ವಗುರು’ ಗೌರವ ನೀಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಅವರ ಪವಿತ್ರ ವ್ಯಕ್ತಿತ್ವ ಮತ್ತು ಜೀವನವು ಮುಂದಿನ ಅನೇಕ ಪೀಳಿಗೆಗಳಿಗೆ ಮಹತ್ತರ ಪ್ರೇರಣೆ ಹಾಗೂ ಮಾರ್ಗದರ್ಶನವಾಗಿ ಉಳಿಯಲಿದೆ.
ಇಸ್ಕಾನ್ ಬೆಂಗಳೂರು ಅಧ್ಯಕ್ಷರು ಹಾಗೂ ಅಕ್ಷಯ ಪಾತ್ರ ಪ್ರತಿಷ್ಠಾನದ ಸಂಸ್ಥಾಪಕ-ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಮತ್ತು ಇಸ್ಕಾನ್ ಬೆಂಗಳೂರು ಹಿರಿಯ ಉಪಾಧ್ಯಕ್ಷರು ಹಾಗೂ ಅಕ್ಷಯ ಪಾತ್ರ ಪ್ರತಿಷ್ಠಾನದ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಕ್ತರು, ದಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಭ್ರಮೋತ್ಸವವು ಮಂಗಳಾಚರಣೆ ಹಾಗೂ ಉತ್ಸಾಹಭರಿತ ಹರಿನಾಮ ಸಂಕೀರ್ತನೆಯೊಂದಿಗೆ ಆರಂಭವಾಯಿತು. ನಂತರ ಗಣ್ಯರಿಂದ ಪ್ರೇರಣಾದಾಯಕ ಭಾಷಣಗಳು ನಡೆದವು. ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಲ ಪ್ರಭುಪಾದರ ಕೊಡುಗೆಗಳನ್ನು ಪ್ರಶಂಸಿಸಿದ ದೃಶ್ಯಾವಳಿಗಳ ಸಂಗ್ರಹ ಹಾಗೂ ಮಹಾ ಕುಂಭಮೇಳದ ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಸಭಿಕರಿಗೆ ಪ್ರದರ್ಶಿಸಲಾಯಿತು.ಕಾರ್ಯಕ್ರಮವು ಶ್ರೀಲ ಪ್ರಭುಪಾದರಿಗೆ ಗುರುಪೂಜೆ ಸಲ್ಲಿಸುವುದರೊಂದಿಗೆ ಹಾಗೂ ಎಲ್ಲರಿಗೂ ರುಚಿಕರವಾದ ಕೃಷ್ಣ ಪ್ರಸಾದ ವಿತರಿಸುವುದರೊಂದಿಗೆ ಸಂಪನ್ನವಾಯಿತು.


