ಬೆಂಗಳೂರು: ನಟಿ ಕೃಷಿ ತಾಪಂಡ (Krishi Thapanda )ಅವರ ಸ್ನೇಹಿತ ವೈಶಾಖ್(Vaishak Suicide) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆ ನಡೆದ ದಿನವೇ ನಟಿ ಕೃಷಿ ತಾಪಂಡ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಕೃಷಿ ತಾಪಂಡ ಅವರು ಮೂರು ದಿನ ಕ್ಷೇಮವನಕ್ಕೆ ಹೋಗಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಫ್ಲ್ಯಾಟ್‌ಗೆ ಬಂದಾಗ ಬಾಗಿಲು ಲಾಕ್ ಆಗಿತ್ತು ಎಂದು ಹೇಳಿದ್ದಾರೆ.
ಫ್ಲ್ಯಾಟ್‌ಗೆ ಎರಡು ಕೀಗಳಿದ್ದು, ಒಂದು ತಮ್ಮ ಬಳಿಯಿತ್ತು. ಇನ್ನೊಂದು ವೈಶಾಖ್ ಬಳಿಯಿತ್ತು. ತಮ್ಮ ಬಳಿಯಿದ್ದ ಕೀಯಿಂದ ಬಾಗಿಲು ತೆರೆದಾಗ ವೈಶಾಖ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಸೀರೆಯನ್ನು ಕತ್ತರಿಸಿ ಮೃತದೇಹವನ್ನು ಕೆಳಗಿಳಿಸಿದ್ದಾಗಿ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಹಾಗೂ ವೈಶಾಖ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.
ಪ್ರಕರಣದ ತನಿಖೆ ವೇಳೆ ಪೊಲೀಸರು ಕೃಷಿ ತಾಪಂಡ ಅವರ ಮೊಬೈಲ್ ಫೋನ್ ಪರಿಶೀಲಿಸಿದ್ದಾರೆ. ಮೆಸೇಜ್‌ಗಳು, ಕಾಲ್ ಲಿಸ್ಟ್ ಹಾಗೂ ವಾಟ್ಸಪ್ ಚಾಟ್‌ಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಅನುಮಾನಾಸ್ಪದ ಸಂದೇಶಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಹೇಳಿಕೆ ಪಡೆದು ಮೊಬೈಲ್ ವಾಪಸ್ ನೀಡಿದ್ದಾರೆ.
ವೈಶಾಖ್ ಪತ್ನಿ ದೂರಿನಲ್ಲೇನಿದೆ?
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಖ್ ಅವರ ಪತ್ನಿ ಮೇಘನಾ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ವೈಶಾಖ್ ತಂದೆಗೆ ಕರೆ ಮಾಡಿ, ಎಲಿಗೆಂಟ್ ಟೆರಸ್ ಅಪಾರ್ಟ್‌ಮೆಂಟ್‌ನ 403ನೇ ಫ್ಲ್ಯಾಟ್‌ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳಕ್ಕೆ ತೆರಳಿ ನೋಡಿದಾಗ ಕೃಷಿ ತಾಪಂಡ ಅವರ ಫ್ಲ್ಯಾಟ್‌ನ ಕೋಣೆಯ ಬೆಡ್ ಮೇಲೆ ವೈಶಾಖ್ ಮೃತದೇಹ ಪತ್ತೆಯಾಗಿತ್ತು. ಫ್ಯಾನಿಗೆ ಸೀರೆಯಿಂದ ನೇಣು ಬಿಗಿದಿದ್ದು, ಅರ್ಧ ಸೀರೆ ತುಂಡಾಗಿತ್ತು. ಕುತ್ತಿಗೆ ಭಾಗದಲ್ಲಿ ಗುರುತು ಕೂಡ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಫಾರ್ಮ್ ಹೌಸ್ ಗೇಟ್ ಬಳಿ ನಾಡಬಾಂಬ್ ಸ್ಫೋಟ – ವಕೀಲನ ಸ್ಥಿತಿ ಗಂಭೀರ
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವೈಶಾಖ್ ಆತ್ಮಹತ್ಯೆ ಕುರಿತು ಯಾರ ಮೇಲೂ ಅನುಮಾನವಿಲ್ಲ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಹಚ್ಚುವಂತೆ ಮೇಘನಾ ಮನವಿ ಮಾಡಿದ್ದಾರೆ. ಈ ದೂರಿನ ಆಧಾರದಲ್ಲಿ ಆರ್.ಆರ್.ನಗರ ಪೊಲೀಸರು ಅನುಮಾನಾಸ್ಪದ ಸಾವಿನ (UDR) ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮಂಜುನಾಥನ ಮೊರೆ ಹೋದ ವಿಜಯೇಂದ್ರ!
