ರಾಮನಗರ: ನಾಡಬಾಂಬ್ ಸ್ಫೋಟಗೊಂಡು (Crude Bomb Blast) ವಕೀಲರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹಾರೋಹಳ್ಳಿ (Harohalli) ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು (Bengaluru) ಮೂಲದ ಮೋಹನ್ ಗಾಯಗೊಂಡ ವಕೀಲ. ಮೋಹನ್ ಸುಂಡಗಟ್ಟ ಗ್ರಾಮದಲ್ಲಿ ಫಾರ್ಮ್ ಹೌಸ್ ಹೊಂದಿದ್ದರು. ಗುರುವಾರ ತಡರಾತ್ರಿ ತಮ್ಮ ಫಾರ್ಮ್ ಹೌಸ್‌ಗೆ ಬಂದು ತಂಗಿದ್ದರು ಎನ್ನಲಾಗಿದೆ. ಈ ವೇಳೆ ಯಾರೋ ಕಿಡಿಗೇಡಿಗಳು, ಫಾರ್ಮ್ ಹೌಸ್‌ನ ಗೇಟ್ ಬಳಿ ನಾಡಬಾಂಬ್ ಇಟ್ಟಿದ್ದಾರೆ. ಇದನ್ನೂ ಓದಿ: ನನ್ನ ಮಗಳು ತಪ್ಪು ಮಾಡಿದ್ರೆ ಅದೇ ಕೋಟೆಯಿಂದ ತಳ್ಳಿ ಬಿಡಿ – ಸಿಯಾ ಪೋಷಕರ ಆಕ್ರೋಶ
ಶುಕ್ರವಾರ (ಜೂ.26) ಮುಂಜಾನೆ ಮೋಹನ್ ಫಾರ್ಮ್ ಹೌಸ್‌ನಿಂದ ಹೊರಬಂದಾಗ, ಗೇಟ್ ಬಳಿ ಇಟ್ಟಿದ್ದ ನಾಡಬಾಂಬ್ ಗಮನಿಸದೇ ಅದರ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಕೀಲ ತೀವ್ರವಾಗಿ ಗಾಯಗೊಂಡಿದ್ದಾರೆ.
ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಡಲಾಗಿತ್ತು ಎನ್ನಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಯುವತಿಯ ರಂಪಾಟ – ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್
