Connect with us

Crime

ಜೊತೆಗಾರ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಕಂಡು ಹೃದಯಾಘಾತದಿಂದ ಜಿಂಕೆ ಸಾವು!

Published

on

ಕಾರವಾರ: ತನ್ನ ಜೊತೆಗಾರ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಕಂಡ ಜಿಂಕೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ದಾಂಡೇಲಿ ರೈಲ್ವೇ ಗೇಟ್ ಸಮೀಪದ ಅಂಬೆವಾಡಿಯಲ್ಲಿ  ನಡೆದಿದೆ.

ದಾಂಡೇಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜಮೀರ್ ಮುಲ್ಲಾ ಅವರ ಕಾರು ದಾಂಡೇಲಿಯಿಂದ ಹಳಿಯಾಳ ಕಡೆ ವೇಗವಾಗಿ ಹೋಗುತ್ತಿತ್ತು. ಮಾರ್ಗಮಧ್ಯೆದ ಕಾಡಿನಲ್ಲಿ ನಾಯಿಗಳು ಎರಡು ಜಿಂಕೆಗಳನ್ನು ಅಟ್ಟಿಸಿಕೊಂಡು ಬರುತ್ತಿದ್ದವು. ಈ ವೇಳೆ ವೇಗವಾಗಿ ಬಂದ ಕಾರು ಒಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲಿಯೇ ಮೃತಪಟ್ಟಿದೆ. ಕಣ್ಣೇದುರೇ ಜೊತೆಗಾರ ಸಾವನ್ನಪ್ಪಿದ್ದರಿಂದ ಆಘಾತಕ್ಕೆ ಒಳಗಾದ ಮೊತ್ತೊಂದು ಜಿಂಕೆಗೆ ಹೃದಯಾಘಾತದಿಂದ ಅದರ ಪಕ್ಕದಲ್ಲೇ ಮೃತಪಟ್ಟಿದೆ.

ಜಿಂಕೆಗಳ ಹೃದಯ ಅತೀ ಮೃದು ಹಾಗೂ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅವುಗಳಿಗೆ ಚಿಕ್ಕ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಮೊದಲೇ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಹೆದರಿದ ಈ ಜಿಂಕೆಗಳು ಓಡುವಾಗ ಕಾರಿಗೆ ಒಂದು ಜಿಂಕೆ ಡಿಕ್ಕಿಹೊಡೆದ್ದು, ಅಲ್ಲಿಯೇ ಪ್ರಾಣಬಿಟ್ಟಿತ್ತು. ಇನ್ನೊಂದು ಘಟನೆಯಿಂದ ಆಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದೆ ಎಂದು ದಾಂಡೇಲಿಯ ಅರಣ್ಯಾಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ.

ಈ ವಲಯವು ರಕ್ಷಿತ ಅರಣ್ಯದ ವ್ಯಾಪ್ತಿಗೆ ಬರುತಿದ್ದು, ಇಂತಹ ಸ್ಥಳದಲ್ಲಿ ವೇಗದ ಮಿತಿ ಪ್ರತಿ ಗಂಟೆಗೆ 20 ರಿಂದ 40 ಕಿ.ಮೀ. ಇರಬೇಕು. ಪ್ರಾಣಿಗಳು ಓಡಾಡಿವ ಸ್ಥಳವಾದ್ದರಿಂದ ಅರಣ್ಯ ಇಲಾಖೆ ವೇಗದ ಮಿತಿಯ ಫಲಕ ಹಾಕಿದ್ದಾರೆ. ಆದರೂ ಸವಾರರು, ಚಾಲಕರು ವಾಹನವನ್ನು ಅತಿ ವೇಗದಲ್ಲಿ ಚಲಾಯಿಸುತ್ತಾರೆ. ಇದರಿಂದಾಗಿ ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಘಟನೆಯ ಸಂಬಂಧ ಶಿಕ್ಷಣಾಧಿಕಾರಿ ಜಮೀರ್ ಮುಲ್ಲಾ ಅವರ ಕಾರು ಚಾಲಕ ಸಂಜೀವ್ ಕುಮಾರ್ ನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.