Recent News

ಅಧಿಕಾರಿಯನ್ನು ಭ್ರಷ್ಟ ಎಂದ ಬಿಜೆಪಿ ಮೇಯರ್ ವಿರುದ್ಧ ಕೇಸ್

ಲಕ್ನೋ: ಅಧಿಕಾರಿಯನ್ನು ಭ್ರಷ್ಟ ಎಂದು ಕರೆದಿದ್ದಕ್ಕೆ ಉತ್ತರ ಪ್ರದೇಶದ ಬರೇಲಿಯ ಮೇಯರ್ ವಿರುದ್ಧ ಕೇಸ್ ದಾಖಲಾಗಿದೆ.

ಬರೇಲಿಯ ಬಿಜೆಪಿ ಮೇಯರ್ ಉಮೇಶ್ ಗೌತಮ್ ಅವರು, ನಗರ ಆರೋಗ್ಯ ಅಧಿಕಾರಿ ಸಂಜೀವ್ ಪ್ರಾದ್ ಅವರಿಗೆ ಬಾಯಿಗೆ ಬಂದಂತೆ ಬೈದು, ಭ್ರಷ್ಟ ಎಂದು ಕರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಅಧಿಕಾರಿ ಸಂಜೀವ್ ಪ್ರಾದ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೇಯರ್ ಸೇರಿದಂತೆ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬರೇಲಿಯ ಆಯುಕ್ತ ಕಚೇರಿಗೆ ಮೇಯರ್ ಉಮೇಶ್ ಗೌತಮ್ ಸೋಮವಾರ ಆಗಮಿಸಿದ್ದರು. ಈ ವೇಳೆ ಆಯುಕ್ತರ ಎದುರೇ, ನೀವು ಎಷ್ಟು ಹಣವನ್ನು ಪಡದಿದ್ದೀರಾ? ಏನು ನೋಡುತ್ತಿದ್ದೀರಾ ಎಂದು ಸಂಜೀವ್ ಪ್ರಾದ್ ಅವರಿಗೆ ಕೇಳಿದರು. ಆಗ ಆಯುಕ್ತರು ಮಧ್ಯಪ್ರವೇಶಿಸಿ ಉತ್ತರ ನೀಡುತ್ತಿದ್ದರೂ ಆಲಿಸದ ಮೇಯರ್, ಸಂಜೀವ್ ಪ್ರಾದ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಾವು ನೀವು ಕೂಡಿ ಇಂತಹ ಅಧಿಕಾರಿಗೆ ಭ್ರಷ್ಟಾಚಾರ ನಡೆಸಲು ದಾರಿ ಮಾಡಿಕೊಡಬೇಕೆ ಎಂದು ಆಯುಕ್ತರನ್ನು ಪ್ರಶ್ನಿಸಿದರು.

ಇಂತಹ ಅಧಿಕಾರಿಗಳು ಸೇರಿ ಬರೇಲಿಯನ್ನು ಹಾಳು ಮಾಡುತ್ತಿದ್ದಾರೆ. ಏನು ಮಾಡಬೇಕು, ಏನು ಮಾಡಬಾರದು ಎನ್ನುವ ನಿರ್ಧಾರ ಕೈಗೊಳ್ಳಲು ಜನರು ನನಗೆ ಮತ ಹಾಕಿ ಕಳುಹಿಸಿದ್ದಾರೆ ಎಂದು ಹೇಳಿ ಸಂಜೀವ್ ಅವರ ಕೈ ಹಿಡಿದು ಎಳೆದಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೇಯರ್ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಈ ಘಟನೆಯ ಕುರಿತು ಅಧಿಕಾರು ಸಂಜೀವ್ ಪ್ರಾದ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಹಿರಿಯ ಮುಖಂಡ ಕೈಲಾಶ್ ವಿಜಯ್‍ವರ್ಗೀಯ ಅವರ ಪುತ್ರ, ಶಾಸಕ ಆಕಾಶ್ ವಿಜಯ್‍ವರ್ಗಿಯ ಅವರು ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದರು.

Leave a Reply

Your email address will not be published. Required fields are marked *