– ನಾಪತ್ತೆಯಾಗಿರೋ ಪತ್ನಿಯ ಮೇಲೆ ಶಂಕೆ
ಉಡುಪಿ: ದುಬೈನ (Dubai) ಶಾರ್ಜಾದಲ್ಲಿ ಉಡುಪಿ (Udupi) ಮೂಲದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶ್ ಕುಂದರ್ ಕೊಲೆಯಾದ ದುರ್ದೈವಿ. ಕಳೆದ ಜುಲೈ ತಿಂಗಳಲ್ಲಿ ಈ ಕೊಲೆ ನಡೆದಿದ್ದು, ಎರಡು ತಿಂಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಅವರನ್ನು ದುಷ್ಕರ್ಮಿಗಳು ಕೊಲೆಮಾಡಿ, ಶವವನ್ನು 9 ತುಂಡುಗಳನ್ನಾಗಿ ಮಾಡಿ, ಅವರದ್ದೇ ಕಾರಿನ ಡಿಕ್ಕಿಯಲ್ಲಿ ತುಂಬಿದ್ದರು ಎಂದು ತಿಳಿದುಬಂದಿದೆ. ಈ ಕೊಲೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ರೈಲಿನಲ್ಲಿ ಅಕ್ರಮ ಗಾಂಜಾ ಸಾಗಾಟ – ಆರೋಪಿ ವಶಕ್ಕೆ, 5 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾ ಸೀಜ್
ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ಪ್ರಕಾಶ್ ವಾಸವಾಗಿದ್ದರು. ಕೊಲೆಯ ಬಳಿಕ ಮೃತನ ಪತ್ನಿ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿಯೇ ಕೊಲೆ ಮಾಡಿಸಿದ್ದಾರೆಯೇ? ಅಥವಾ ಬೇರೆಯವರ ಸಹಾಯದಿಂದ ಕೃತ್ಯ ಎಸಗಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪತ್ನಿ ಮತ್ತು ಪುತ್ರ ಭಾರತಕ್ಕೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವಾಯ್ಸ್ ಮೆಸೇಜ್ ಮಾಡದೇ ಇದ್ದಾಗ ಮೂಡಿದ್ದ ಶಂಕೆ
ಜು.20 ರಂದು ಸಹೋದರನನ್ನು ಸಂಪರ್ಕಿಸಲು ಪ್ರಶಾಂತ್ ಕುಂದರ್ ಯತ್ನಿಸಿದ್ದರು. ಯಾವಾಗಲೂ ಪ್ರಕಾಶ್ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರ ನೀಡುತ್ತಿದ್ದರು. ಕುಟುಂಬಸ್ಥರು ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಕಡಿತಗೊಂಡಿತ್ತು.
ಇದರಿಂದ ಆತಂಕಗೊಂಡ ಸಂಬಂಧಿಕರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದರು. ಆಗ ಅವರು ಭಾರತಕ್ಕೆ ಹೋಗಿರುವುದಾಗಿ ಕಂಪನಿ ತಿಳಿಸಿತ್ತು. ಆದರೆ ಭಾರತಕ್ಕೆ ಬಾರದೇ ಇರುವುದರಿಂದ ಶಾರ್ಜಾದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಬಂದು ಬಾಲಕಿ ಮೇಲೆ ಗ್ಯಾಂಗ್ ರೇಪ್ – ಓರ್ವ ಅರೆಸ್ಟ್, ಆರೋಪಿ ಕಾಲಿಗೆ ಗುಂಡೇಟು


