ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ(Krishna Janmashtami) ಪಾವನ ಪರ್ವದ ಅಂಗವಾಗಿ ಇಲ್ಲಿನ ಶ್ರೀಕೃಷ್ಣ ಮಠದಲ್ಲಿ(Krishna Mutt) ಶನಿವಾರ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಭ್ರಮದ ಆಚರಣೆ ನಡೆಯಿತು. ಮಠದಲ್ಲಿ ದಿನವಿಡೀ ನಡೆದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡರು.
ಪರ್ಯಾಯ ಶ್ರೀ ಶಿರೂರು ಮಠದ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀಕೃಷ್ಣ ದೇವರಿಗೆ ವಿಶೇಷ ಅಲಂಕಾರ ನೆರವೇರಿಸಿ ಮಹಾಪೂಜೆ ಸಲ್ಲಿಸಿದರು. ಬಳಿಕ ಕೃಷ್ಣನ ಜನ್ಮ ಕ್ಷಣವಾದ ಮಧ್ಯರಾತ್ರಿ 12:12ಕ್ಕೆ ಚಂದ್ರೋದಯದ ಶುಭ ಮುಹೂರ್ತದಲ್ಲಿ, ರೋಹಿಣಿ ನಕ್ಷತ್ರದ ಪುಣ್ಯ ಕಾಲದಲ್ಲಿ ಬಾಲಕೃಷ್ಣನಿಗೆ ಶಂಖದಲ್ಲಿ ನೀರು, ಹೂವು, ನಿಂಬೆಹಣ್ಣನ್ನು ಇಟ್ಟು ಭಕ್ತಿಪೂರ್ವಕವಾಗಿ ಅರ್ಘ್ಯ ಪ್ರದಾನ ಮಾಡಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯವನ್ನು ನೀಡುವುದು ಅತ್ಯಂತ ಪವಿತ್ರವಾದ ಭಕ್ತಿಯ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅರ್ಘ್ಯ ಸಮರ್ಪಿಸಿದರು. ಬಳಿಕ ನೆರೆದಿದ್ದ ನೂರಾರು ಭಕ್ತರೂ ಸಹ ಸರದಿಯಲ್ಲಿ ಬಂದು ಕೃಷ್ಣನಿಗೆ ಅರ್ಘ್ಯ ಅರ್ಪಿಸಿ ಪುನೀತರಾದರು. ಇದನ್ನೂ ಓದಿ: ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಹೂವಿನಿಂದ ಕಂಗೊಳಿಸಿದ ಕೃಷ್ಣ ಮಠ
