– ಪೊಲೀಸರೊಂದಿಗೆ ತಳ್ಳಾಟ – ವಾಗ್ವಾದ
ಮಂಡ್ಯ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಾಂಗ್ರೆಸ್ ಕಾರ್ಯಕರ್ತರು (Congress Workers) ಹಮ್ಮಿಕೊಂಡಿದ್ದ ಪ್ರತಿಭಟನೆ ನೂಕಾಟ-ತಳ್ಳಾಟಕ್ಕೆ ಸಾಕ್ಷಿಯಾಯಿತು.

ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಭಾವಚಿತ್ರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿಯನ್ನ ದಹಿಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬೆಂಕಿ ಹಚ್ಚದಂತೆ ತಡೆದರು.
ಮೋದಿ ಅವರ ಪೋಸ್ಟರ್ ಹಾಗೂ ಪ್ರತಿಕೃತಿಯನ್ನ ಕಿತ್ತುಕೊಳ್ಳಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ನೂಕಾಟ-ತಳ್ಳಾಟ ನಡೆಯಿತು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನ ತಕ್ಷಣವೇ ವಜಾಗೊಳಿಸಿ ಬಂಧಿಸಬೇಕು. ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನ ಬಿಜೆಪಿ ಕಚೇರಿಯಂತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜ್ಞಾನೇಶ್ ಕುಮಾರ್ ವಿರುದ್ಧ ಉಗ್ರ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಕೃತಿ ದಹನಕ್ಕೆ ಪೊಲೀಸರು ತಡೆ ಒಡ್ಡಿದಾಗ ಉಂಟಾದ ವಾಗ್ವಾದದಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

