– ಉಪಾಹಾರಕ್ಕೆ ಕುಳಿತು 1 ಗಂಟೆ ಕಾದ ಮಾವುತರು, ಕಾವಾಡಿಗಳು
– ಸಮಯಪ್ರಜ್ಞೆ ಇಲ್ವೇನ್ರಿ? ಅಂತ ಯತೀಂದ್ರ ವಿರುದ್ಧ ಅಸಮಾಧಾನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆರಂಭದಲ್ಲೇ ಕಾಂಗ್ರೆಸ್ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಮಾವುತರ (Mahouts) ಉಪಾಹಾರ ಕೂಟ ಸಮಾರಂಭಕ್ಕೆ ಸಮಯಕ್ಕೆ ಸರಿಯಾಗಿ ಬಾರದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಹಿರಿಯ ಶಾಸಕ ತನ್ವೀರ್ ಸೇಠ್ (Tanveer Sait) ಅವರು ಅಸಮಾಧಾನಗೊಂಡಿರುವ ಘಟನೆ ನಡೆದಿದೆ.
ಹೌದು. ಅಂಬಾವಿಲಾಸ ಅರಮನೆ ಆವರಣದಲ್ಲಿಂದು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬಕ್ಕೆ ಜಿಲ್ಲಾಡಳಿತ ವತಿಯಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮಾವುತರನ್ನು ಕೂರಿಸಿ, ಬಾಳೆ ಎಲೆ ಕೂಡ ಹಾಕಲಾಗಿತ್ತು. ಆದ್ರೆ ಸಚಿವರಾದ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು 1 ಗಂಟೆಗೂ ಹೆಚ್ಚು ಕಾಲ ತಡವಾಗಿ ಆಗಮಿಸಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

ಸಮಯ ಪ್ರಜ್ಞೆ ಇಲ್ವೇನ್ರಿ?
ಔತಣ ಕೂಟಕ್ಕೆ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದುನಿಂತಿದ್ದ ಶಾಸಕರು ಬಳಿಕ ಕೋಪಗೊಂಡು ಅಲ್ಲಿಂದ ಹೊರಟಿದ್ದಾರೆ. ʻಸಮಯ ಪ್ರಜ್ಞೆ ಇರಬೇಕು, ಸಮಯ ಪ್ರಜ್ಞೆ ಇಲ್ಲ ಅಂದ್ರೆ ಏನ್ಮಾಡಬೇಕು? ಬೇರೆ ಕಾರ್ಯಕ್ರಮ ಆದರೇ ಹೇಗೊ ಸರಿ… ಇಂತಹ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರೆ ಅದರ ಅರ್ಥ ಏನು? There is a limit For Everything, ಇದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ. ಮಾವುತರನ್ನ ಹೀಗೆ ಕಾಯಿಸುವುದಾ? ನೋ ನೋ ನಾನು ಇಲ್ಲಿಂದ ಹೊರಡುತ್ತೇನೆ ಎಂದು ಜಿಲ್ಲಾಧಿಕಾರಿಗಳಿಗೆ ಫೋನ್‌ನಲ್ಲಿ ಹೇಳಿ ಸಿಟ್ಟಿನಿಂದ ಹೊರಟಿದ್ದಾರೆ.

1 ಗಂಟೆ ಕಾದುಕುಳಿತ ಮಾವುತರು
ಇನ್ನೂ ಮಾವುತರು – ಕವಾಡಿಗಳಿಗೆ ಆಯೋಜಿಸಿದ್ದ ಉಪಾಹಾರ ಕೂಟಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು 1 ಗಂಟೆ 15 ನಿಮಿಷ ತಡವಾಗಿ ಬಂದ ಹಿನ್ನೆಲೆ ಮಾವುತರು ಬಾಳೆ ಎಲೆ ಮುಂದೆಯೇ ಕಾದು ಕುಳಿತುಕೊಳ್ಳಬೇಕಾದ ಪ್ರಸಂಗ ಬಂದಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದ್ರೆ ಯತೀಂದ್ರ ಅವರು 10 ಗಂಟೆ 15 ನಿಮಿಷಕ್ಕೆ ಬಂದು ಬಳಿಕ ಮಾವುತರಿಗೆ ಉಪಾಹಾರ ಬಡಿಸಿದರು.

