ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬಣಶಶಿ ಕಡಲ ತೀರದಲ್ಲಿ ಸಮುದ್ರದಲ್ಲಿ ಇಳಿದಿದ್ದ ಐವರು ಪ್ರವಾಸಿಗರು ಅಲೆಗಳಿಗೆ ಕೊಚ್ಚಿಕೊಂಡು ಹೋಗಿದ್ದು, ಇಬ್ಬರು ಸಾವು ಕಂಡಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಸಮುದ್ರದಲ್ಲಿ ಕಾಣೆಯಾದ ಘಟನೆ ನಡೆದಿದೆ.
ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ದುಬ್ಬಣಶಶಿ ಬೀಚ್ನಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯ 16 ಉದ್ಯೋಗಿಗಳ ತಂಡ ನಿನ್ನೆ ರಾತ್ರಿ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ದುಬ್ಬಣಶಶಿ ಬೀಚ್ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಸದಸ್ಯರು ಇಂದು ಬೆಳಗ್ಗೆ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಭಾರೀ ಅಲೆಗಳಿಗೆ ಐವರು ಪ್ರವಾಸಿಗರು ಸಿಲುಕಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ, ಮೂಲತಃ ಜಾರ್ಖಂಡ್ನ ಯುವತಿ ಶೋಭಾ ದಾಸ್ (22) ಹಾಗೂ ಬೆಂಗಳೂರಿನ ಮುಸ್ಲಿಂ ಕಾಲೋನಿ ನಿವಾಸಿ ಮಹಮದ್ ಅಕ್ರಮ್ ಮೃತಪಟ್ಟಿದ್ದಾರೆ. ಬೆಂಗಳೂರಿನ ನಿಶಾಂತ್ ಡಿ.ವಿ. (26) ಹಾಗೂ ಮಹಮದ್ ಖಾಸಿಂ ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಆನಂದ ಕುಲಾಲ್ (24) ಎಂಬಾತ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಕುಲಾಲ್ಗಾಗಿ ಗೋಕರ್ಣ ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲಾದವರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಪ್ರವಾಸಿಗನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
