Districts
ಸ್ನೇಹಿತರನ್ನು ಭೇಟಿಯಾಗಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ- ಇಬ್ಬರ ದುರ್ಮರಣ

ತುಮಕೂರು: ಬೈಕ್ ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಕ್ಯಾತ್ಸಂದ್ರದ ಶಿವರಾಜ್ ಟಾಕೀಸ್ ಬಳಿ ನಡೆದಿದೆ.
ಹಾವೇರಿ ಮೂಲದ ಶಂಕರ್ ಜೋಷಿ ಹಾಗೂ ವೇಣುಗೋಪಾಲ ಎಂಬವರು ಮೃತ ದುರ್ದೈವಿಗಳಾಗಿದ್ದು, ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮೃತ ಶಂಕರ್ ಜೋಷಿ ಗಾಗೂ ವೇಣುಗೋಪಾಲ ಬೆಂಗಳೂರಿನಿಂದ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬೈಕ್ನಲ್ಲಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ತುಮಕೂರಿಗೆ ಹೋಗುತ್ತಿದ್ದರು. ಸುಮಾರು 6.30 ಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಳಿ ಬಂದಾಗ ನಿಧಾನವಾಗಿ ಬೈಕ್ ಓಡಿಸುತಿದ್ದರು. ಆದರೆ ತಮಿಳುನಾಡು ಮೂಲದ ಲಾರಿ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬರು ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡು ಮೃತಪಟ್ಟರೆ, ಮತ್ತೊಬ್ಬರಿಗೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
