ಚೆನ್ನೈ: ಡಿಎಂಕೆ ಆಕ್ರೋಶದ ಬೆನ್ನಲ್ಲೇ ತಮಿಳುನಾಡಿನ (Tamilnadu) ಮುಖ್ಯಮಂತ್ರಿ ವಿಜಯ್ (CM Vijay) ಅವರು ನೀಡಿದ್ದ ಟೆಂಡರ್‌ವೊಂದನ್ನು ಇದೀಗ ರದ್ದುಗೊಳಿಸಿದ್ದಾರೆ.
ಸಿಎಂ ವಿಜಯ್ ಅವರು ತೂತುಕುಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ 3,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕಟ್ಟಲು ನೀಡಿದ್ದ 16.83 ಲಕ್ಷ ರೂ. ಮೌಲ್ಯದ ಸರ್ಕಾರಿ ಟೆಂಡರ್‌ನ್ನು ಓಪನ್ ಮಾಡಿದ ಆರು ಗಂಟೆಯಲ್ಲೇ ಕ್ಲೋಸ್ ಮಾಡಿದ್ದರು. ಈ ಹಿನ್ನೆಲೆ ಸ್ಥಳೀಯರಿಂದ ಹಾಗೂ ವಿರೋಧ ಪಕ್ಷದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ನೀಡಿದ್ದ ಟೆಂಡರ್‌ನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮತ್ತೆ ಚುರುಕು – ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ
ನಿಯಮಗಳ ಪ್ರಕಾರ, ಮೇ 13ರಿಂದಲೇ ಟೆಂಡರ್ ವಿವರಗಳು ಗುತ್ತಿಗೆದಾರರಿಗೆ ಸಿಗಬೇಕಾಗಿತ್ತು. ಆದರೆ, ಮೇ 18ರಂದು ಬೆಳಗ್ಗೆ 9 ಗಂಟೆಗೆ ಟೆಂಡರ್ ಓಪನ್ ಮಾಡಿ, ಕೇವಲ ಆರು ಗಂಟೆ ಸಮಯಾವಕಾಶ ನೀಡಿ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಟೆಂಡರ್ ಕ್ಲೋಸ್ ಮಾಡಿದ್ದರು. ಬಳಿಕ ಮಾರನೇ ದಿನ ಮಧ್ಯಾಹ್ನ 4 ಗಂಟೆಗೆ ಟೆಂಡರ್ ಅನ್ನು ಒಬ್ಬರಿಗೆ ವಹಿಸಿಕೊಟ್ಟರು. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಟೆಂಡರ್ ಅನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿ, ಅಕ್ರಮ ಎಸಗಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ತನಿಖೆ ಮುಗಿಯುವವರೆಗೆ ಅಮಾನತು ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದ್ದ ಡಿಎಂಕೆ, ಈಗ ಟಿವಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಒಂದು ನಿರ್ದಿಷ್ಟ ಕಂಪನಿಗೆ ಲಾಭ ಮಾಡಿಕೊಡಲು ಈ ರೀತಿ ತಪ್ಪು ದಾರಿಯಲ್ಲಿ ಟೆಂಡರ್ ನಡೆಸಿದ್ದಾರೆ ಎಂದು ಆರೋಪಿಸಿದೆ.ಇದನ್ನೂ ಓದಿ: ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
ಡಿಎಂಕೆ ಹಿರಿಯ ನಾಯಕ ಅಮುದರಸನ್, ಯಾವ ಕಂಪನಿಯಾದರೂ ಕೇವಲ ಆರು ಗಂಟೆಗಳಲ್ಲಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ, ಎಲ್ಲಾ ನಿಯಮಗಳನ್ನು ಮುಗಿಸಲು ಹೇಗೆ ಸಾಧ್ಯ? ಇದು ಆಡಳಿತದ ವೇಗವಲ್ಲ. ಇದು ಮೊದಲೇ ಪ್ಲ್ಯಾನ್ ಮಾಡಿ ಮಾಡಿರುವ ಕಾಂಟ್ರಾಕ್ಟ್ ರಾಜಕಾರಣ. ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿರುವ ಟಿವಿಕೆ ನಾಯಕ ಎನ್.ಆನಂದ್ ಅವರು ಮೊದಲ ದಿನವೇ ಇಷ್ಟೊಂದು ಅವಸರವಾಗಿ ಕೆಲಸ ಮಾಡುವ ಅಗತ್ಯವೇನಿತ್ತು? ಅಥವಾ ಇದು ಮೊದಲೇ ನಿರ್ಧಾರವಾಗಿರುವ ಕಾಂಟ್ರಾಕ್ಟ್‌ಗೆ ಅಧಿಕಾರದ ಮುದ್ರೆ ಒತ್ತುವ ಕೆಲಸವೇ? `ಪ್ರಾಮಾಣಿಕ’ ರಾಜಕಾರಣ ಬಿಟ್ಟು ಇಂತಹ `ತುರ್ತು ಟೆಂಡರ್’ ರಾಜಕಾರಣ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡ ನಂತರ ಸರ್ಕಾರಕ್ಕೆ ಎದುರಾದ ಎರಡನೇ ದೊಡ್ಡ ಹಿನ್ನಡೆ ಇದಾಗಿದೆ. ಇದಕ್ಕೂ ಮುನ್ನ ತಮ್ಮ ಜ್ಯೋತಿಷಿಯನ್ನು ಸರ್ಕಾರದ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿ, ಬಳಿಕ ವಿರೋಧ ಪಕ್ಷಗಳ ತೀವ್ರ ಬೆನ್ನಲ್ಲೇ ಆದೇಶವನ್ನು ರದ್ದುಗೊಳಿಸಿದ್ದರು.ಇದನ್ನೂ ಓದಿ: ಆಲಮಟ್ಟಿ ಜಲಾಶಯದಲ್ಲಿದೆ ಕೇವಲ 9 ಟಿಎಂಸಿಯಷ್ಟು ನೀರು – ಕೃಷ್ಣೆಯ ಒಡಲಲ್ಲಿ ನೀರಿಗಾಗಿ ಹಾಹಾಕಾರ

