Tuesday, 23rd July 2019

Recent News

ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೈಲು ಚಾಲಕ ಛತ್ರಿ ಹಿಡಿದು ರೈಲು ಚಾಲನೆ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ರೈಲಿನ ಛಾವಣಿಯಿಂದ ನೀರು ಸೋರಿಕೆಯಾಗ್ತಿದ್ದು, ಇದರಿಂದ ಕಂಟ್ರೋಲ್ ಪ್ಯಾನಲ್‍ಗೆ ಹಾನಿಯಾಗದಂತೆ ರಕ್ಷಿಸಲು ಚಾಲಕ ಛತ್ರಿ ಹಿಡಿದು ಕೂತಿದ್ದಾರೆ. ಅಲ್ಲದೆ ನೆಲದ ಮೇಲೆ ದಿನಪತ್ರಿಕೆಗಳನ್ನ ಹಾಸಲಾಗಿದ್ದು ಅವೂ ಕೂಡ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ.

ಇದನ್ನೂ ಓದಿ: ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

ರೈಲು ಚಾಲಕ ತನ್ನ ಕರ್ತವ್ಯವನ್ನ ನಿರ್ವಹಿಸಿದ್ರೆ ಸ್ಪೀಕರ್ ಮತ್ತು ಕ್ಯಾಮೆರಾ ಹಿಂದಿದ್ದ ಮತ್ತೋರ್ವ ವ್ಯಕ್ತಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ವರ್ಷಗಳಿಂದ ಈ ಸೋರಿಕೆ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ. ಎಲ್ಲಾ ಸಮಯದಲ್ಲೂ ನಾವು ಹೆಚ್ಚಾಗೇ ಜಾಗರೂಕರಾಗಿರಬೇಕು ಅಂತ ಹೇಳಿದ್ದಾರೆ.

ಜಾಗರೂಕತೆಯಿಂದ ಇರೋಕೆ ನಮಗೇನೂ ತೊಂದರೆಯಿಲ್ಲ. ಆದ್ರೆ ಕೆಲಸದಲ್ಲಿ ಸಾಕಷ್ಟು ಅನಾನುಕೂಲಗಳು ಹಾಗೂ ತೊಂದರೆಗಳಿವೆ ಅಂತ ಅವರು ಹೇಳಿದ್ದಾರೆ.

ತಮ್ಮ ಸಂಕಷ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಈ ವಿಡಿಯೋವನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಅಂತ ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಜಾರ್ಖಂಡ್‍ನಲ್ಲಿ ಚಿತ್ರೀಕರಿಸಲಾಗಿದೆ ಆದ್ರೆ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆದ್ರೆ ಈ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. ನಮಗೆ ಈ ಬಗ್ಗೆ ಕಾಳಜಿ ಇದೆ. ತನಿಖೆ ಮಾಡಲಾಗಿದೆ. ಇದು ಕಾರ್ಯನಿರ್ವಹಿಸದ ಎಂಜಿನ್ ಆಗಿದ್ದು ಮುಂದಿನಿಂದ ಮತ್ತೊಂದು ಎಂಜಿನ್ ಅದನ್ನ ಎಳೆದೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದೆ.

Leave a Reply

Your email address will not be published. Required fields are marked *